ಮೊಟ್ಟೆ ದುಬಾರಿ, ಶಿಕ್ಷಕರ ಜೇಬಿಗೆ ಕತ್ತರಿ

egg
egg costly
Published on

*ಸರ್ಕಾರ ಯೋಜನೆ ಅನುಷ್ಟಾನಕ್ಕೆ ಸಿಬ್ಬಂದಿಯ ಸ್ವಂತ ಹಣ ಬಳಕೆ
*ಬೋಧಕ ವರ್ಗದಲ್ಲಿ ಅಸಮಾಧಾನದ ಹೊಗೆ

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸುವಷ್ಟರಲ್ಲಿ ಶಿಕ್ಷಕರು ಕಣ್ಣುಬಾಯಿ ಬಿಡುವಂತಾಗಿದ್ದು, ಯೋಜನೆ ಅನುಷ್ಠಾನಕ್ಕೆ ಸರ್ಕಾರದ ಅನುದಾನ ಬಳಕೆ ಮಾಡಬೇಕಾದ ಶಿಕ್ಷಕರು ತಮ್ಮ ಜೇಬಿನಿಂದ ಹಣ ವಿನಿಯೋಗಿಸುವ ಅನಿವಾರ್ಯತೆ ನಿರ್ಮಾಣವಾಗಿದೆ.
ಹೌದು…ಸರ್ಕಾರಿ ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಉದ್ದೇಶದಿಂದ ಜಾರಿಗೊಳಿಸಿರುವ ಮೊಟ್ಟೆ ವಿತರಣೆ ಯೋಜನೆ ಶಿಕ್ಷಕರ ಪಾಲಿಗೆ ದುಭಾರಿಯಾಗಿ ಪರಿಣಮಿಸಿದೆ. ಮೊಟ್ಟೆ ಖರೀದಿ ಹಾಗೂ ನಿರ್ವಹಣೆಗೆ ಸರ್ಕಾರ ಕೊಡುತ್ತಿರುವ ಬಿಡಿಗಾಸು ಸಾಕಾಗದೆ ಶಿಕ್ಷಕರು ಕಳೆದ ಆರೇಳು ತಿಂಗಳಿಂದ ತಮ್ಮ ಸಂಬಳದ ಹಣವನ್ನು ವಿನಿಯೋಸುತ್ತಿರುವುದು ಕಂಡುಬರುತ್ತಿದೆ.
ಒಂದು ಮೊಟ್ಟೆಗೆ ಸರ್ಕಾರ ಕೊಡುತ್ತಿದೆ 6 ರೂ.: ಆಯಾ ಶಾಲೆಯ ಮಕ್ಕಳ ಹಾಜರಾತಿ ದಾಖಲೆಯಂತೆ ಸರ್ಕಾರದಿಂದ ಪ್ರತಿ ವಿದ್ಯಾರ್ಥಿಗೆ ಒಂದು ಮೊಟ್ಟೆಗೆ 6 ರೂಪಾಯಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಕಳೆದ ಆರೇಳು ತಿಂಗಳಿಂದ ಮೊಟ್ಟೆಯ ದರ 7 ರೂಪಾಯಿ ಆಗಿದೆ. ಕೆಲವು ಕಡೆಗಳಲ್ಲಿ 7.50 ರೂ. 8 ರೂಪಾಯಿವರೆಗೆ ಬೆಲೆ ಏರಿದೆ. ಆದರೆ ಸರ್ಕಾರ 6 ರೂಪಾಯಿಯಷ್ಟನ್ನೇ ಪಾವತಿ ಮಾಡುತ್ತಿದೆ. ಇದರಿಂದ ಆಯಾ ಶಾಲೆ ಶಿಕ್ಷಕರು ತಮ್ಮ ಸ್ವಂತ ಹಣದಿಂದ ಉಳಿಕೆ ಹಣವನ್ನು ಬಳಸುವ ಅನಿವಾರ್ಯತೆ ನಿರ್ಮಾಣವಾಗಿದೆ.

ಮೊಟ್ಟೆ ಸುಲಿಯಲು 50 ಪೈಸೆ! ಇನ್ನು ಮೊಟ್ಟೆ ಖರೀದಿಗೆ 7 ರೂಪಾಯಿ ಪಾವತಿಸುತ್ತಿರುವ ಶಿಕ್ಷಕರು ಒಂದು ಮೊಟ್ಟೆ ಸುಲಿಯಲು 50 ಪೈಸೆ ನೀಡಬೇಕಿದೆ. ಅದಕ್ಕೂ ಮೊದಲು ಮೊಟ್ಟೆ ಬೇಸಿಯಲು ಪ್ರತ್ಯೇಕ ಹಣ ನೀಡಬೇಕಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಇದರಿಂದ ಸರಾಸರಿ ಪ್ರತಿ ಮೊಟ್ಟೆಗೆ 2 ರೂಪಾಯಿಯಷ್ಟು ಹೆಚ್ಚುವರಿ ನೀಡಬೇಕಾಗಿದೆ. ಸರ್ಕಾರದ ಯೋಜನೆ ಅನುಷ್ಟಾನಕ್ಕೆ ಪ್ರತಿತಿಂಗಳು ಸಾವಿರಾರು ರೂಪಾಯಿಯನ್ನು ಶಿಕ್ಷಕರೇ ಭರಿಸುವಂತ ಶಿಕ್ಷೆ ಅನುಭವಿಸಬೇಕಾಗಿದೆ.

ಒಡೆದ ಮೊಟ್ಟೆ ಲಾಸ್ : ಹೋಲ್‌ಸೇಲ್‌ನಲ್ಲಿ ಮೊಟ್ಟೆ ಖರೀದಿಸಿ ಶಾಲೆಗಳಿಗೆ ತರುತ್ತಿದ್ದು, ಪ್ರತಿದಿನ ಮೊಟ್ಟೆಗಳು ಒಡೆದು ಹೋಗುವುದು, ಕೆಲವು ಕೆಟ್ಟು ಹೋಗಿರುವುದು ಸಾಮಾನ್ಯವಾಗಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮೊಟ್ಟೆ ಸಾಲದಾದರೆ ಮತ್ತೆ ಹಣ ತೆತ್ತು ಮೊಟ್ಟೆ ತರಿಸಬೇಕಾದ ಅನಿವಾರ್ಯತೆ ಇದೆ ಎಂದು ಶಿಕ್ಷಕರು ಅಸಹಾಯತೆ ತೋಡಿಕೊಳ್ಳುತ್ತಿದ್ದಾರೆ.

ಬಿಸಿಯೂಟಕ್ಕೆ ಹೆಚ್ಚು‘ವರಿ’: ಇದೆಲ್ಲ ಮೊಟ್ಟೆ ಕಥೆಯಾದರೆ, ಇನ್ನು ಬಿಸಿಯೂಟಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿಯಲ್ಲೂ ಶಿಕ್ಷಕರು ಹೈರಾಣಾಗುತ್ತಿದ್ದಾರೆ, ಸಾಂಬಾರು ಸಿದ್ಧಪಡಿಸಲು ಬೇಕಾದ ಪುಡಿ, ತರಕಾರಿ, ಬೇಳೆ ಅಸಮರ್ಪಕ ಪೂರೈಕೆ ಶಿಕ್ಷಕರಿಗೆ ತಲೆಬೇನೆ ತರಿಸುತ್ತಿದೆ. ಪ್ರತಿದಿನ ಮಕ್ಕಳಿಗೆ ಯಾವ ಪಾಠ ಮಾಡಬೇಕು? ಯಾವ ಚಟುವಟಿಕೆ ನಡೆಸಬೇಕು ಎಂಬುದಕ್ಕಿಂತ ನಾಳೆ ಮಕ್ಕಳಿಗೆ ಯಾವ ರೀತಿ ಊಟ ತಯಾರಿಸಬೇಕು, ಹೇಗೆ ವಸ್ತುಗಳ ನಿರ್ವಹಣೆ ಮಾಡಬೇಕು ಎಂಬ ಚಿಂತೆಯೇ ಶಿಕ್ಷಕರನ್ನು ಹೆಚ್ಚು ಬಾಧಿಸುತ್ತಿದೆ. ಹಲವು ಸಂದರ್ಭಗಳಲ್ಲಿ ಅಡುಗೆ ಸಿಬ್ಬಂದಿ ಏಕಾಏಕಿ ಗೈರಾಗುವುದರಿಂದ ಶಿಕ್ಷಕರೆ ಮುಂದೆ ನಿಂತು ಬಿಸಿಯೂಟ ತಯಾರಿಸಬೇಕಾದ ಅನಿವಾರ್ಯತೆ ಕಂಡುಬರುತ್ತಿದೆ ಎನ್ನಲಾಗಿದ್ದು, ಹಲವು ಶಾಲೆಗಳಲ್ಲಿ ಶಿಕ್ಷಕ ಸಿಬ್ಬಂದಿ ಮೊಟ್ಟೆ ಸುಲಿಯುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.

--------------
ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಿ ಆಧಾರದ ಮೇಲೆ ಮೊಟ್ಟೆ ಖರೀದಿಸುವುದರಿಂದ ದರ ಏರಿಕೆಯನ್ನು ನಿರ್ವಹಿಸಬಹುದು. ಅಲ್ಲದೆ ಮೊಟ್ಟೆಗಳನ್ನು ಹೋಲ್‌ಸೆಲ್‌ನಲ್ಲಿ ಖರೀದಿ ಮಾಡುವುದರಿಂದ ಹೆಚ್ಚಿನ ಹೊರೆ ಬೀಳುವುದಿಲ್ಲ. ಸರ್ಕಾರ ನೀಡುವ ಅನುದಾನವನ್ನೇ ಸದ್ಬಳಕೆ ಮಾಡಿಕೊಂಡು ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ.

ಕೃಷ್ಣಮೂರ್ತಿ, ಡಿಸಿಪಿಐ ಬೆಂಗಳೂರು ಗ್ರಾಮಾಂತರ

ಈ ಹಿಂದಿನಿಂದಲೂ ಈ ಸಮಸ್ಯೆ ಇದೆ. ಮೊಟ್ಟೆ ದರ ಏರಿಕೆಯಾದರೆ ಸರ್ಕಾರ ನೀಡುವ ಅನುದಾನ ಸೀಮಿತವಾಗಿರುತ್ತದೆ, ಇದರಿಂದ ಹೆಚ್ಚಿನ ಹೊರೆಯನ್ನು ಮುಖ್ಯಶಿಕ್ಷಕರೇ ಭರಿಸಬೇಕಾಗಿದೆ. ಈ ಬಗ್ಗೆ ಯಾರಿಗೂ ದೂರು ನೀಡುವಂತಿಲ್ಲ. ಸರ್ಕಾರದ ಯೋಜನೆಯನ್ನು ಅನುಷ್ಟಾನ ಮಾಡುವುದಷ್ಟೇ ನಮ್ಮ ಕೆಲಸ. ಆದ್ದರಿಂದ ಹೆಚ್ಚುವರಿ ಹಣವನ್ನು ಸ್ವಂತ ಖರ್ಚಿನಿಂದ ಭರಿಸುವುದು ಅನಿವಾರ್ಯ.
ಹೆಸರು ಹೇಳಲು ಇಚ್ಛಿಸದ ಮುಖ್ಯಶಿಕ್ಷಕ, ದೇವನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net