

ಉಡುಪಿ: ಕೊಳೆತ ಮೊಟ್ಟೆಯಿಂದ ಮಂಗಳೂರಲ್ಲಿ ಗರ್ಭಿಣಿಗೆ ಅನಾರೋಗ್ಯ ಉಂಟಾಗಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ನಾನು ಮಾತನಾಡಿದಿದ್ದೇನೆ. ಆ ಕುಟುಂಬಕ್ಕೆ ಸಹಾಯ ಬೇಕಿದ್ದರೆ ಸರ್ಕಾರ ಒದಗಿಸುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊಟ್ಟೆ ಹಂಚಿಕೆ ವಿಚಾರದಲ್ಲಿ ನಾಲ್ಕು ಡಿವಿಷನ್ ರೂಪಿಸಿದ್ದೇವೆ. ಅತ್ಯಂತ ಶೀಘ್ರದಲ್ಲಿ ನಾವು ಟೆಂಡರನ್ನು ಕರೆಯುತ್ತೇವೆ. ಜಿಲ್ಲಾ ಮಟ್ಟದಲ್ಲಿ ಸ್ಟೋರೇಜ್ ಗಳನ್ನ ಮಾಡುವ ಆಲೋಚನೆ ಇದೆ ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆ, ಕರ್ನಾಟಕದಲ್ಲಿ ಮಹಿಳೆಯರನ್ನ ಆರ್ಥಿಕವಾಗಿ ಸಬಲೀಕರಣ ಗೊಳಿಸುತ್ತದೆ. ಮಹಿಳೆಯರಿಗೆ ವಾರ್ಷಿಕವಾಗಿ 24,000 ನೇರವಾಗಿ ಖಾತೆಗೆ ಬರುತ್ತದೆ. 18500 ಕೋಟಿಯನ್ನ ಈಗಾಗಲೇ ಬಜೆಟ್ ನಲ್ಲಿ ಹಣ ಇರಿಸಲಾಗಿದೆ. ರಾಜ್ಯಾದ್ಯಂತ ಅದ್ಭುತವಾದ ಪ್ರತಿಕ್ರಿಯೆ ಸಿಕ್ಕಿದೆ. 1.9 ಕೋಟಿ ಕುಟುಂಬಗಳು ಈಗ ಯೋಜನೆಯನ್ನು ನೋಂದಾವಣೆ ಮಾಡಿಕೊಂಡಿದೆ. ಎಲ್ಲೂ ಕೂಡ ಫೋರ್ಜರಿ ಮಾಡಲು ಸಾಧ್ಯ ಆಗದಂತೆ ನಾವು ಸಾಫ್ಟ್ವೇರ್ ನಿಮಾರ್ಣ ಮಾಡಿದ್ದೇವೆ. ಬೇರೆ ಅಕೌಂಟ್, ಹೆಸರು ಕೊಟ್ಟು ಸರ್ಕಾರದ ದಿಕ್ಕನ್ನು ತಪ್ಪಿಸಲು ಸಾಧ್ಯವಿಲ್ಲ. ಬಾಕಿಯಿರುವ ಆರು ಲಕ್ಷ ಕಾರ್ಡ ಲಾನುಭವಿಗಳು ನೋಂದಾಯಿಸಲು ಆಧಾರ್ ತಿದ್ದುಪಡಿ ಪಡಿತರ ಚೀಟಿ ತಿದ್ದುಪಡಿ ಮಾಡಬಹುದು. ತಿದ್ದುಪಡಿಗೆ ಒಂದು ತಿಂಗಳ ಅವಕಾಶವನ್ನು ಸರ್ಕಾರ ಕೊಡುತ್ತದೆ ಎಂದರು.