

ಶನಿವಾರಸಂತೆ: ಅಜೀಮ್ ಪ್ರೇಮ್‌ಜಿ ಪೌಂಡೇಷನ್ ವತಿಯಿಂದ ವಿದ್ಯಾರ್ಥಿಗಳಿಗೆ ವಾರದ 4 ದಿನ ಮೊಟ್ಟೆ ವಿತರಣೆ ಯೋಜನೆ ಮೂಲಕ ಸಮೀಪದ ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಗುರುವಾರ ಮೊಟ್ಟೆ ವಿತರಣೆ ಮಾಡಲಾಯಿತು.
ಮೊಟ್ಟೆ ವಿತರಣೆ ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ವಿದ್ಯಾಸಂಸ್ಥೆ ನಿರ್ದೇಶಕ ಬಿ.ಕೆ.ಯತೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ, ಪಠ್ಯೇತರ ಚಟುವಟಿಕೆಯ ಜತೆಯಲ್ಲಿ ಶಿಸ್ತು-ನಿಯಮಗಳನ್ನು ಅಳವಡಿಸಿಕೊಳ್ಳಬೇಕು. ಇದರ ಜತೆಯಲ್ಲಿ ಆರೋಗ್ಯ, ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮ ಪೌಷ್ಟಿಕ ಆಹಾರವನ್ನು ಸೇವಿಸುವ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಶಾಲಾ ಮುಖ್ಯಶಿಕ್ಷಕ ಅಬ್ದುಲ್ ರಬ್ ದಿನದ ಮಹತ್ವ ಕುರಿತು ಮಾತನಾಡಿ, ಅಜೀಮ್ ಪ್ರೇಮ್‌ಜಿ ನಮ್ಮ ದೇಶದ ಪ್ರಖ್ಯಾತ ಉದ್ದೇಮಿಯಾಗಿದ್ದು, ಇವರು ತಮ್ಮ ಸಂಸ್ಥೆಯಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗಾವಕಾಶ ಮಾಡಿಕೊಟ್ಟಿದ್ದು ಈ ಮೂಲಕ ಅವರು ಜೀವನದ ದಾರಿ ದೀಪವಾಗಿದ್ದಾರೆ. ಅಜೀಮ್ ಪ್ರೇಮ್‌ಜಿ ಅವರು ಸಮಾಜ ಸೇವಕರಾಗಿದ್ದು ಇದೀಗ ಅವರ ಸಂಸ್ಥೆಯ ಫೌಂಡೇಷನ್ ಯೋಜನಡಿಯಲ್ಲಿ ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ವಾರದ 4 ದಿನ ಮೊಟ್ಟೆ ವಿತರಣೆ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಶಾಲಾ ಶಿಕ್ಷಕರು ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.