

| ಪಿ.ಎಸ್.ಹರೀಶ್ ಕೋಲಾರ
ಅಪೌಷ್ಟಿಕತೆ ಹೋಗಲಾಡಿಸುವ ಉದ್ದೇಶದಿಂದ ಸರ್ಕಾರ ಅಂಗನವಾಡಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಮೊಟ್ಟೆ ನೀಡುತ್ತಿದ್ದು, ಹಲವು ತಿಂಗಳುಗಳಿಂದ ಅಂಗನವಾಡಿ ಕಾರ್ಯಕರ್ತೆಯರ ಜಂಟಿ ಖಾತೆಗೆ ಹಣ ಜಮಾ ಆಗದಿರುವುದರಿಂದ ಮೊಟ್ಟೆ ಹೊರೆಯಾಗಿದೆ.
ಜಿಲ್ಲೆಯಲ್ಲಿ 2080 ಅಂಗನವಾಡಿಗಳಿದ್ದು, 85,000ಕ್ಕೂ ಅಧಿಕ ಮಕ್ಕಳು, ಗರ್ಭಿಣಿ, ಬಾಣಂತಿಯರು ಸೇರಿ ಸುಮಾರು 1.08 ಲಕ್ಷ ಫಲಾನುಭವಿಗಳಿದ್ದಾರೆ. ನಿಯಮದಂತೆ ಪ್ರತಿ ಕೇಂದ್ರ ವ್ಯಾಪ್ತಿಯ 3ರಿಂದ 6 ವರ್ಷದೊಳಗಿನ ಮಕ್ಕಳಿಗೆ ವಾರಕ್ಕೆ ಎರಡು ದಿನ ಹಾಗೂ ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿಯರಿಗೆ ತಿಂಗಳಿಗೆ 25 ಮೊಟ್ಟೆ ವಿತರಿಸಬೇಕು. ಪ್ರತಿ ಮೊಟ್ಟೆಗೆ ಸರ್ಕಾರ 5 ರೂ. ನೀಡುತ್ತದೆ.
ಸರ್ಕಾರ 2017ರ ಡಿಸೆಂಬರ್‌ನಲ್ಲಿ ಒಂದು ಮೊಟ್ಟೆಗೆ 6.50 ರೂ. ನಿಗದಿಪಡಿಸಿತ್ತು. 2019ರ ಸೆಪ್ಟೆಂಬರ್‌ನಲ್ಲಿ ಮೊಟ್ಟೆ ದರ ಪರಿಷ್ಕರಿಸಿ 5 ರೂ.ಗೆ ನಿಗದಿ ಮಾಡಿತ್ತು. ನಂತರ ಪರಿಷ್ಕರಣೆ ಮಾಡಿಲ್ಲ. ಮೊಟ್ಟೆ ದರದಲ್ಲಿ ಏರಿಳಿತ ಕಾಣುತ್ತಿದ್ದು, ಕರೊನಾ ಆರಂಭದ ದಿನಗಳಲ್ಲಿ ಕುಕ್ಕುಟೋದ್ಯಮ ನೆಲಕಚ್ಚಿದ ಸಂದರ್ಭದಲ್ಲಿ ಒಂದು ಮೊಟ್ಟೆ ಬೆಲೆ ಗರಿಷ್ಠ 7 ರೂ. ಆಗಿದ್ದಿದೆ. ದರ ಹೆಚ್ಚಾದಾಗ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರು ಸ್ವಂತ ಹಣದಿಂದ ಮೊಟ್ಟೆ ಕೊಟ್ಟಿದ್ದು, ಪ್ರತಿ ಅಂಗನವಾಡಿ ಕೇಂದ್ರಕ್ಕೆ ಮಾಸಿಕ 1200 ರೂ. ಹೆಚ್ಚು ಹೊರೆಯಾಗಿದೆ.
ಕಳೆದ ಕೆಲ ತಿಂಗಳುಗಳಿಂದ ಸರ್ಕಾರದಿಂದ ಸರಿಯಾಗಿ ಹಣ ಬಿಡುಗಡೆಯಾಗಿಲ್ಲ. ಕೋಲಾರದಲ್ಲಿ 3 ತಿಂಗಳು, ಬಂಗಾರಪೇಟೆ 5 ತಿಂಗಳು, ಮಾಲೂರಿನಲ್ಲಿ 3 ತಿಂಗಳ ಹಣ ಬಾಕಿ ಇದೆ. ಬೇತಮಂಗಲ, ಮುಳಬಾಗಿಲು, ಶ್ರೀನಿವಾಸಪುರದಲ್ಲೂ ಅಂಗನವಾಡಿ ಕೇಂದ್ರಗಳಿಗೆ ಹಣ ಬಿಡುಗಡೆ ಆಗದಿರುವುದರಿಂದ ಮೊಟ್ಟೆ ಖರೀದಿಸಿ ಮಕ್ಕಳಿಗೆ ನೀಡುವುದು ಹೊರೆಯಾಗಿದೆ.
ಈಗಾಗಲೆ ಸಾಲ ಮಾಡಿ ಮೊಟ್ಟೆ ತಂದು ಫಲಾನುಭವಿಗಳಿಗೆ ನೀಡಿದ್ದೇವೆ. ನಮ್ಮ ಮೇಲಿನ ನಂಬಿಕೆಯಿಂದ ಅಂಗಡಿಯವರು ಇಷ್ಟು ದಿನ ಸಾಲ ನೀಡಿದ್ದಾರೆ. ಕರೊನಾ ಸಂಕಷ್ಟದ ಸಂದರ್ಭದಲ್ಲಿ ಸಾಲ ಕೇಳಲು ನಮಗೂ ಕಷ್ಟವಾಗುತ್ತಿದೆ ಎಂದು ಕಾರ್ಯಕರ್ತೆಯರು ಅಳಲು ತೋಡಿಕೊಂಡಿದ್ದಾರೆ.
ಪ್ರತಿ ತಿಂಗಳು ಮುಂಚಿತವಾಗೇ ಮೊಟ್ಟೆ ಹಣವನ್ನು ಆಯಾ ಅಂಗನವಾಡಿ ವ್ಯಾಪ್ತಿಯ ಬಾಲಿಕಾ ಸಮಿತಿ ಸದಸ್ಯೆ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಜಂಟಿ ಖಾತೆಗೆ ಜಮಾ ಮಾಡಿದರೆ ಸಮಸ್ಯೆ ಬರುವುದಿಲ್ಲ. ಮೊಟ್ಟೆ ದರ ಪರಿಷ್ಕರಣೆ ಮಾಡದಿದ್ದರೆ ಕೈಯಿಂದ ಎಷ್ಟು ಹಣ ಹಾಕುವುದು ಎಂದು ಕಾರ್ಯಕರ್ತೆಯರು ಬೇಸತ್ತಿದ್ದಾರೆ. ಸರ್ಕಾರ ನೀಡುವ ಅನುದಾನಕ್ಕೆ ಎಷ್ಟು ಮೊಟ್ಟೆ ಬರುತ್ತದೋ ಅದಕ್ಕೆ ತಕ್ಕಂತೆ ಖರೀದಿಸಿ ನೀಡುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ಬಳಿ ಪ್ರಸ್ತಾವನೆ ಇಡಲು ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಗಳು ಮುಂದಾಗಿವೆ.
ಜಿಲ್ಲೆಯಲ್ಲಿ ಆರು ತಿಂಗಳಿಂದ ಮೊಟ್ಟೆ ಹಣ ಜಮಾ ಮಾಡಿಲ್ಲ. ಅಧಿಕಾರಿಗಳನ್ನು ಕೇಳಿದರೆ ಅನುದಾನ ಇಲ್ಲ ಎನ್ನುತ್ತಾರೆ. ಮಾಸಾಂತ್ಯದೊಳಗೆ ಜಮಾ ಮಾಡದಿದ್ದಲ್ಲಿ 2021ರಿಂದ ಫಲಾನುಭವಿಗಳಿಗೆ ಮೊಟ್ಟೆ ಕೊಡುವುದನ್ನು ನಿಲ್ಲಿಸಬೇಕಾಗುತ್ತದೆ. ಎಂ.ಸರಸ್ವತಮ್ಮ, ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿ ಜಿಲ್ಲಾಧ್ಯಕ್ಷೆ ಅಂಗನವಾಡಿ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಮೊಟ್ಟೆಗಾಗಿ ಪ್ರತಿ ತಿಂಗಳು 50ರಿಂದ 54 ಲಕ್ಷ ರೂ. ಅವಶ್ಯವಿದ್ದು, ಹಣ ಬಿಡುಗಡೆಗೆ ಸರ್ಕಾರ ಕ್ರಮ ಕೈಗೊಂಡಿದೆ. 10ರಿಂದ 15 ದಿನದೊಳಗೆ ಹಣ ಖಾತೆಗೆ ಜಮಾ ಅಗಲಿದೆ. ಎಂ.ಜಿ.ಪಾಲಿ, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೋಲಾರ ತಾಲೂಕಿನಲ್ಲಿ 3ರಿಂದ 6 ವರ್ಷದೊಳಗಿನ 6000 ಅಂಗನವಾಡಿ ಮಕ್ಕಳು, 7000 ಗರ್ಭಿಣಿ, ಬಾಣಂತಿಯರಿದ್ದಾರೆ. ಪ್ರತಿ ತಿಂಗಳು ಮೊಟ್ಟೆ ಬಾಬ್ತು 11ರಿಂದ 12 ಲಕ್ಷ ರೂ. ಅವಶ್ಯವಿದ್ದು, ಮೂರು ತಿಂಗಳಿನಿಂದ ಬಾಕಿ ಇದ್ದ ಹಣ ಬಿಡುಗಡೆಯಾಗಿದೆ. ರಮೇಶ್, ಸಿಡಿಪಿಒ, ಕೋಲಾರ