ಮೊಟ್ಟೆ ಇಷ್ಟ, ಖರೀದಿಯಲ್ಲಿಲ್ಲ ನಷ್ಟ!

images
Published on

 ಶಿವರಾಜ.ಎಂ ಬೆಂಗಳೂರು ಗ್ರಾಮಾಂತರ

ಸರ್ಕಾರಿ ಶಾಲೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆಗೆ ವಾರದ 6 ದಿನವೂ ಮೊಟ್ಟೆ ವಿತರಣೆ ಕಾರ್ಯಕ್ರಮ ಜಾರಿಯಾದ ಬಳಿಕ ಮೊಟ್ಟೆ ಖರೀದಿಯಲ್ಲಿ ನಷ್ಟವಾಗಲಿದೆ ಎಂಬ ಆತಂಕ ಎದುರಾಗಿತ್ತು. ಆದರೆ ಕಳೆದೆರಡು ತಿಂಗಳಿಂದ ಮೊಟ್ಟೆ ದರದಲ್ಲಿ ಇಳಿಕೆಯಾಗಿರುವುದು ಆತಂಕವನ್ನು ದೂರ ಮಾಡಿದೆ.

ವಿದ್ಯಾರ್ಥಿಗಳಿಗೆ ವಾರದಲ್ಲಿ ಆರೂ ದಿನವೂ ಮೊಟ್ಟೆ ವಿತರಿಸಬೇಕಾದ ಅನಿವಾರ್ಯತೆ ಹಿನ್ನೆಲೆಯಲ್ಲಿ ಜವಾಬ್ದಾರಿ ಹೊತ್ತ ಆಯಾ ಶಾಲೆ ಮುಖ್ಯಶಿಕ್ಷಕರು ಮೊಟ್ಟೆ ಖರೀದಿ ವೇಳೆ ಹೆಚ್ಚುವರಿ ಹಣ ಭರಿಸಬೇಕಾದ ಸಂಕಷ್ಟ ಎದುರಿಸುತ್ತಿದ್ದು. ಈ ಹಿಂದೆ 5 ರೂಪಾಯಿ ಐದುವರೆ ರೂಪಾಯಿಯಿಂದ ದಿಢೀರ್ ಮೊಟ್ಟೆಯ ದರ 6 ರೂಪಾಯಿ ಏರಿಕೆ ಕಂಡಿತ್ತು. ನಂತದ ಕೆಲವು ದಿನಗಳಲ್ಲಿ 7 ರೂಪಾಯಿವರೆಗೂ ತಲುಪಿತ್ತು ಈ ವೇಳೆ ಮುಖ್ಯ ಶಿಕ್ಷಕರಿಗೆ ಮೊಟ್ಟೆ ಖರೀದಿಯೇ ಸವಾಲಾಗಿ ಪರಿಣಮಿಸಿತ್ತು. ಆದರೆ ಇದ್ದಕ್ಕಿದ್ದಂತೆ ದರದಲ್ಲಿ ಇಳಿಕೆ ಕಂಡಿದೆ. ಗ್ರಾಮಾಂತರ ಜಿಲ್ಲೆಯಲ್ಲಿ ಸರಾಸರಿ 5 ರಿಂದ 6 ರೂಪಾಯಿ ದರ ಇರುವುದರಿಂದ ಯಾವುದೇ ತೊಂದರೆ ಎದುರಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರ ಮೊಟ್ಟೆಗೆ 6 ರೂಪಾಯಿ ದರ ನಿಗಧಿಪಡಿಸಿರುವ ಬಗ್ಗೆ ಅನೇಕ ಜಿಲ್ಲೆಗಳಲ್ಲಿ ಸಾಕಷ್ಟು ಅಸಮಾಧಾನ ಎದುರಾಗಿತ್ತು. ಆದರೆ ಜಿಲ್ಲೆಯಲ್ಲಿ ಅಂಥ ಸನ್ನಿವೇಶ ಸೃಷ್ಟಿಯಾಗಿಲ್ಲ ಎಂಬುದು ಶಿಕ್ಷಕರ ವಲಯದಲ್ಲಿ ಸಾಮಾಧಾನ ತಂದಿದೆ ಎನ್ನಲಾಗಿದೆ.

ಮೊಟ್ಟೆ ಶೇಕರಣೆ ಕಷ್ಟ: ಕೆಲವು ಶಾಲೆಗಳಲ್ಲಿ ಮೊಟ್ಟೆ ದರ ಏರಿಕೆ ದರವನ್ನು ಸರಿದೂಗಿಸಲು ಸಗಟಾಗಿ ಮೊಟ್ಟೆ ಖರೀದಿಸಿ ಶೇಕರಿಸುವ ಉಪಾಯ ಕಂಡುಕೊಂಡಿದ್ದರು. ಆದರೆ ಬಹಳಷ್ಟು ಶಾಲೆಗಳಲ್ಲಿ ಈ ಪ್ರಯೋಗ ಸಲವಾಗಲಿಲ್ಲ. ಅಲ್ಲದೆ ಮೊಟ್ಟೆಗಳನ್ನು ಶೇಖರಿಸುವುದು ಸೂಕ್ಷ್ಮ ವಿಷಯವಾಗಿರುವುದರಿಂದ ಇಂಥ ಸಾಹಸವನ್ನು ಕೈಬಿಡಲಾಗಿತ್ತು. ಆದ್ದರಿಂದ ಹಲವು ಶಾಲೆಗಳ ಮುಖ್ಯ ಶಿಕ್ಷಕರು ಸರ್ಕಾರ ಕೊಡುತ್ತಿರುವ ಮೊಟ್ಟೆಯ ಹಣದ ಮೊತ್ತ ಹೆಚ್ಚಿಸಬೇಕು ಎಂಬ ಬೇಡಿಕೆ ಇಟ್ಟಿದ್ದರು. ಪ್ರಸ್ತುತ ಇಂಥ ಸನ್ನಿವೇಶ ಇಲ್ಲದಿರುವುದರಿಂದ ಜಿಲ್ಲೆಯ ಶಿಕ್ಷಕರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.

ಮೊಟ್ಟೆ ಸೇವನೆ ಪ್ರಮಾಣ ಹೆಚ್ಚಳ: ಈ ಹಿಂದೆ ವಾರದಲ್ಲಿ 2 ದಿನ ಮೊಟ್ಟೆ ವಿತರಿಸಲಾಗುತ್ತಿತ್ತು. ಆದರೆ ಪ್ರಸ್ತುತ ವಾರದ 6 ದಿನವೂ ಮೊಟ್ಟೆ ವಿತರಿಸುತ್ತಿರುವುದರಿಂದ ಬಿಸಿಯೂಟ ಮಾಡುತ್ತಿರುವ ಮಕ್ಕಳ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬಂದಿದೆ ಎನ್ನಲಾಗಿದೆ. ಬಾಳೆ ಹಣ್ಣು ಸೇವನೆ ಮಾಡುವ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಮೊಟ್ಟೆ ಸೇವನೆ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ, ಮೊಟ್ಟೆ ಪೌಷ್ಟಿಕಾಂಶವುಳ್ಳ ಆಹಾರವಾಗಿರುವುದರಿಂದ ವಿದ್ಯಾರ್ಥಿಗಳು ಹೆಚ್ಚು ಒಲವು ತೋರಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಗ್ರಾಮಾಂತರ ಜಿಲ್ಲೆಯಲ್ಲಿ ಮೊಟ್ಟೆ ಸೇವನೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ ಎಂಬುದು ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಹಾಜರಿ ಸಂಖ್ಯೆಯಲ್ಲೂ ಏರಿಳಿತ: ಸಾಮಾನ್ಯವಾಗಿ ಶಾಲೆಗಳಲ್ಲಿ ಪ್ರತಿನಿತ್ಯ ಮಕ್ಕಳ ಹಾಜರಾತಿ ಸಂಖ್ಯೆಯಲ್ಲಿ ಏರಿಳಿತ ಸಾಮಾನ್ಯಾಗಿರುತ್ತದೆ. ಆದ್ದರಿಂದ ಗೈರಾದ ಮಕ್ಕಳ ಹೆಸರಿನಲ್ಲಿ ಖರೀದಿಸಿದ ಮೊಟ್ಟೆಗಳನ್ನು ದರ ಏರಿಕೆ ಸಮಯದಲ್ಲಿ ಸರಿದೂಗಿಸಬಹುದಾಗಿದೆ ಆದ್ದರಿಂದ ಮೊಟ್ಟೆ ಖರೀದಿ ವಿಷಯದಲ್ಲಿ ಸಮಸ್ಯೆ ಎದುರಾಗಿಲ್ಲ ಎಂಬುದು ಶಿಕ್ಷಣ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಸರ್ಕಾರ ಮೊಟ್ಟೆಯೊಂದಕ್ಕೆ 6 ರೂಪಾಯಿ ದರ ನಿಗಧಿ ಮಾಡಿದೆ ಕೆಲವು ವೇಳೆ ಏಕಾಏಕಿ ಮೊಟ್ಟೆಯ ದರ ಏರಿಕೆಯಾದಾಗ ಗೊಂದಲ ಏರ್ಪಡುವುದು ಸಹಜ. ಆದರೆ ಕೆಲ ತಿಂಗಳ ಹಿಂದೆ ಮೊಟ್ಟೆ ದರ ದಿಢೀರ್ ಏರಿಕೆಯಾಗಿತ್ತು. ಪ್ರಸ್ತುತ ಅಂಥ ಸನ್ನಿವೇಶವಿಲ್ಲ. ಪ್ರಸ್ತುತ ಮೊಟ್ಟೆಯ ದರ 5 ರಿಂದ 6 ರೂಪಾಯಿ ಅಂತರದಲ್ಲೇ ಇರುವುದರಿಂದ ಜಿಲ್ಲೆಯಲ್ಲಿ ಇಂಥ ಸನ್ನಿವೇಶ ಕಂಡುಬಂದಿಲ್ಲ. ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸುವ ಸರ್ಕಾರದ ಕಾರ್ಯಕ್ರಮ ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಾಗಿದೆ.

ಬೈಲಾಂಜನಪ್ಪ, ಉಪನಿರ್ದೇಶಕ ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂ.ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net