ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯನ್ನು 200 ಹಾಸಿಗೆಗೆ ಮೇಲ್ದರ್ಜೆಗೇರಿಸಲು ಪ್ರಯತ್ನ: ಆರಗ ಜ್ಞಾನೇಂದ್ರ

07 tth 01.
ತೀರ್ಥಹಳ್ಳಿಯಲ್ಲಿ ಮಿಷನ್ ಇಂದ್ರಧನುಷ್ 5.0 ಅಭಿಯಾನಕ್ಕೆ ಆರಗ ಜ್ಞಾನೇಂದ್ರ ಚಾಲನೆ ನೀಡಿದರು. ಸುಶೀಲಾ ಶೆಟ್ಟಿ, ಡಾ. ನಟರಾಜ್, ಡಾ. ಗಣೇಶ್ ಭಟ್ ಇತರರಿದ್ದರು.
Published on

ತೀರ್ಥಹಳ್ಳಿ: ನೂರು ಹಾಸಿಗೆಯ ಜಯಚಾಮ ರಾಜೇಂದ್ರ ತಾಲೂಕು ಸರ್ಕಾರಿ ಆಸ್ಪತ್ರೆಯನ್ನು 200 ಹಾಸಿಗೆಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಅಗತ್ಯವಿದ್ದು ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಮಿಷನ್ ಇಂದ್ರಧನುಷ್ 5.0 ಅಭಿಯಾನಕ್ಕೆ ಪಟ್ಟಣದ ಸರ್ಕಾರಿ ಜಯ ಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಶಿಶುಗಳಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿ, ಸರ್ಕಾರಿ ಆಸ್ಪತ್ರೆಗೆ ತಾಲೂಕು ವ್ಯಾಪ್ತಿಯ ರೋಗಿಗಳಲ್ಲದೇ ನೆರೆಯ ಮೂರ‌್ನಾಲ್ಕು ತಾಲೂಕುಗಳಿಂದಲೂ ರೋಗಿಗಳು ಬರುತ್ತಿದ್ದು ಈಗಿರುವ ವ್ಯವಸ್ಥೆಯಲ್ಲಿ ಕೊರತೆ ಕಾಣುತ್ತಿದೆ ಎಂದರು.
ಪಪಂ ಅಧ್ಯಕ್ಷೆ ಸುಶೀಲಾ ಶೆಟ್ಟಿ ಮಾತನಾಡಿ, ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆಯ ಸಲುವಾಗಿ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆ ಅತ್ಯಂತ ಉಪಯುಕ್ತವಾಗಿದೆ. ಶಿಶುಗಳ ಆರೋಗ್ಯದ ವಿಚಾರದಲ್ಲಿ ತಾಯಂದಿರು ಉದಾಸೀನತೆ ತೋರಬಾರದು ಎಂದರು.
ಟಿಎಚ್‌ಒ ಡಾ. ನಟರಾಜ್ ಮಾತನಾಡಿ, ಇಂದಿನಿಂದ ಮುಂದಿನ ಮೂರು ತಿಂಗಳವರೆಗೆ ನಡೆಯಲಿದೆ. ಏಳು ಬಣ್ಣಗಳ ಕಾಮನಬಿಲ್ಲಿನ ಹೋಲಿಕೆಯಂತೆ ಏಳು ಮಾರಕ ರೋಗಗಳ ನಿಯಂತ್ರಣದ ಸಲುವಾಗಿ ಲಸಿಕೆ ಹಾಕಲಾಗುವುದು. ತಾಲೂಕಿನಲ್ಲಿ ಲಸಿಕೆ ತೆಗೆದುಕೊಳ್ಳದ ಒಟ್ಟು 181 ಮಕ್ಕಳನ್ನು ಗುರುತಿಸಲಾಗಿದೆ ಎಂದರು.
ಜಯಚಾಮರಾಜೇಂದ್ರ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಗಣೇಶ್ ಭಟ್, ಮಕ್ಕಳ ತಜ್ಞ ಡಾ. ಪ್ರಭಾಕರ್, ಗ್ರೇಡ್ 2 ತಹಸೀಲ್ದಾರ್ ಸತ್ಯಮೂರ್ತಿ, ಪಪಂ ಸದಸ್ಯ ನವೀನ್ ಯತಿರಾಜ್, ಪಪಂ ಮುಖ್ಯಾಧಿಕಾರಿ ಕುರಿಯಾಕೋಸ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಯಮ್ಮ, ಹಿರಿಯ ಆರೋಗ್ಯ ಸಹಾಯಕ ಬಸವರಾಜ್, ಸುನೀತಾ, ಮಹಿಳ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪವಿತ್ರಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net