ಮಾಜಿ ಸೈನಿಕರ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನ

25-02-Shiva-2
ರಾಯಚೂರಿನ ಐಎಂಎ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಮಾಜಿ ಸೈನಿಕರ ಸಂಘ 14ನೇ ವಾರ್ಷಿಕೋತ್ಸವ ಸಮಾರಂಭವನ್ನು ಸಂಸದ ರಾಜಾ ಅಮರೇಶ್ವರ ನಾಯಕ ಉದ್ಘಾಟಿಸಿದರು. ಸಂಘದ ರಾಜ್ಯಾಧ್ಯಕ್ಷ ಕೆ.ಎನ್.ಶಿವಣ್ಣ, ಜಿಲ್ಲಾಧ್ಯಕ್ಷ ಚೆನ್ನಾರೆಡ್ಡಿ, ಮುಖಂಡ ರವಿ ಬೋಸರಾಜು, ವೈದ್ಯರಾದ ಡಾ.ದೀಪಾಶ್ರೀ ಪಾಟೀಲ್, ಡಾ.ಶಂಕರ ಇದ್ದರು.
Published on

ರಾಯಚೂರು: ದೇಶದ ಭದ್ರತೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿರುವ ಸೈನಿಕರು ನಿವೃತ್ತಿಯ ನಂತರ ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಸಂಸದ ರಾಜಾ ಅಮರೇಶ್ವರ ನಾಯಕ ತಿಳಿಸಿದರು.
ಸ್ಥಳೀಯ ಐಎಂಎ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ 14ನೇ ವಾರ್ಷಿಕೋತ್ಸವ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶಕ್ಕಾಗಿ 15 ರಿಂದ 20 ವರ್ಷ ಕೆಲಸ ಮಾಡಿ ನಿವೃತ್ತಿ ಹೊಂದಿರುವ ಸೈನಿಕರು ಎದುರಿಸುತ್ತಿರುವುದು ಗಮನಕ್ಕೆ ಬಂದಿದ್ದು, ಸಮಸ್ಯೆ ಇತ್ಯರ್ತಕ್ಕೆ ಅಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಮಾಜಿ ಸೈನಿಕರಿಗೆ ಸ್ಥಳೀಯ ಮಟ್ಟದಲ್ಲಿ ಉದ್ಯೋಗದಲ್ಲಿ ಮೀಸಲಾತಿ, ನಿವೇಶನ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಗಮನಕ್ಕೆ ತರಲಾಗಿದ್ದು, ಎಲ್ಲ ಜನಪ್ರತಿನಿಗಳೊಂದಿಗೆ ಸೇರಿದಂತೆ ಹಂತ ಹಂತವಾಗಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಹೇಳಿದರು.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಕೆ.ಎನ್.ಶಿವಣ್ಣ ಮಾತನಾಡಿ, ಸೈನಿಕರು ತಮ್ಮ ಪ್ರಾಣ ಪಣಕ್ಕಿಟ್ಟು ದೇಶದ ಗಡಿ ಭಾಗದಲ್ಲಿ ಕೆಲಸ ಮಾಡುತ್ತಿದ್ದು, ಸೈನಿಕರ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೆ. ಆದರೆ ಸೈನಿಕರು ಮಾಜಿಗಳಾದ ನಂತರ ಅವರ ಸ್ಥಿತಿಗತಿಯನ್ನು ಯಾರೂ ಕೇಳುವುದಿಲ್ಲ.
ಸರ್ಕಾರದಿಂದ ಕನಿಷ್ಠ ಸೌಲಭ್ಯಗಳು ದೊರೆಯುತ್ತಿಲ್ಲ. ಕಚೇರಿಗಳಿಗೆ ವರ್ಷಾನುಗಟ್ಟಲೆ ಅಲೆದಾಡಿದರೂ ಸರ್ಕಾರಕ್ಕೆ ಮಾತ್ರ ಸೈನಿಕರ ಬೇಡಿಕೆ ಈಡೇರಿಕೆಗೆ ನಿರ್ಲಕ್ಷ ತೋರುತ್ತಾ ಬರುತ್ತಿವೆ. 20 ವರ್ಷ ಗಡಿಯಲ್ಲಿ ಸೇವೆ ಮಾಡಿದ ನಂತರ ಕುಟುಂಬ ನಿರ್ವಹಣೆಗೆ ಸಮಸ್ಯೆ ಎದುರಿಸುವಂತಾಗಿದೆ.
ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ಇದ್ದರೂ ಹೆಸರಿಗೆ ಮಾತ್ರವಾಗಿದೆ. ಮಕ್ಕಳಿಗೆ ಶಿಕ್ಷಣ ಒದಗಿಸಲು ಸಾಧ್ಯವಾಗದೆ ಮಾಜಿ ಸೈನಿಕರು ಪರದಾಡುವಂತಾಗಿದೆ. ಜಾತಿಗೊಂಡು ಭವನಗಳಿವೆ, ಆದರೆ ಮಾಜಿ ಸೈನಿಕರ ಭವನಕ್ಕೆ ಸಿಎ ಸೈಟ್ ನೀಡುತ್ತಿಲ್ಲ. ಮಂಜೂರಾಗಿರುವ 5 ಎಕರೆ ಜಮೀನು ನೀಡಲು ಮೀನಾಮೇಷ ಎಣಿಸಲಾಗುತ್ತಿದೆ.
ಆರ್‌ಟಿಪಿಎಸ, ವೈಟಿಪಿಎಸ, ಹಟ್ಟಿ ಚಿನ್ನದ ಗಣಿ, ಪವರ್ ಗ್ರಿಡ್ ಭದ್ರತಾ ಸಿಬ್ಬಂದಿ ನೇಮಕದಲ್ಲಿ ಮಾಜಿ ಸೈನಿಕರಿಗೆ ಆದ್ಯತೆ ನೀಡಬೇಕು. ಇಲ್ಲವಾದಲ್ಲಿ ಸೈನಿಕರಿಗೆ ನೀಡಲಾದ ಪದಕಗಳನ್ನು ಸರ್ಕಾರಕ್ಕೆ ಹಿಂದಿರುಗಿಸಿ ವಿಧಾನಸೌಧದ ಮುಂದೆ ಧರಣಿ ನಡೆಸಲಾಗುವುದು ಎಂದು ತಿಳಿಸಿದರು.
ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾಂಗ್ರೆಸ್ ಮುಖಂಡ ರವಿ ಬೋಸರಾಜು, ಸಂಘದ ಜಿಲ್ಲಾಧ್ಯಕ್ಷ ಚೆನ್ನಾರೆಡ್ಡಿ, ವೈದ್ಯರಾದ ಡಾ.ದೀಪಾಶ್ರೀ ಪಾಟೀಲ್, ಡಾ.ಶಂಕರ, ಕೆ.ಎನ್.ಅರುಣ ಹಾಗೂ ಮಾಜಿ ಸೈನಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net