ಲಕ್ಯಾ ಹೋಬಳಿ ಮಾದರಿಯನ್ನಾಗಿಸಲು ಶ್ರಮ

6 ckm 6
ಚಿಕ್ಕಮಗಳೂರಿನ ಗಾಣದಾಳು ಗ್ರಾಮದಲ್ಲಿ ನಿರ್ಮಿಸುತ್ತಿರುವ 66/11ಕೆ.ವಿ ವಿದ್ಯುತ್ ಉಪಕೇಂದ್ರ ಶಂಕುಸ್ಥಾಪನೆ ಸಭಾ ಕಾರ್ಯಕ್ರಮವನ್ನು ಶಾಸಕ ಎಚ್.ಡಿ.ತಮ್ಮಯ್ಯ ಉದ್ಘಾಟಿಸಿದರು. ಮೊಹಮದ್ ಹನೀಫ್, ದಿನೇಶ್, ಗುರುಮೂರ್ತಿ, ಈರಮ್ಮ, ಶೊಭಾ, ಹಾಲಮ್ಮ ಇದ್ದರು.
Published on

ಚಿಕ್ಕಮಗಳೂರು: ಲಕ್ಯಾ ಹೋಬಳಿ ಎಂದರೆ ಹಿಂದುಳಿದ ಹೋಬಳಿ ಎನ್ನುವ ಮಾತಿದೆ. ಅದರೆ ಮುಂದಿನ ದಿನಗಳಲ್ಲಿ ಇದನ್ನೂ ಮುಂದುವರಿದ ಮಾದರಿ ಹೋಬಳಿಯನ್ನಾಗಿಸಲಾಗುವುದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ವಿದ್ಯುತ್ ಪ್ರಸರಣ ನಿಗಮದಿಂದ ತಾಲೂಕಿನ ಗಾಣದಾಳು ಗ್ರಾಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ 66/11ಕೆ.ವಿ ವಿದ್ಯುತ್ ಉಪಕೇಂದ್ರಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಲಕ್ಯಾ ಭಾಗದಲ್ಲಿ ವಿದ್ಯುತ್ ಉಪಕೇಂದ್ರ ನಿರ್ಮಾಣ ದಶಕದ ಕನಸಾಗಿತ್ತು. ನಿರ್ಮಾಣಕ್ಕೆ ಉಂಟಾಗಿದ್ದ ಎಲ್ಲ ತಾಂತ್ರಿಕ ಅಡೆ ತಡೆಗಳನ್ನು ನಿವಾರಣೆ ಮಾಡಿ ಇಂದು ಶಂಕುಸ್ಥಾಪನೆ ಮಾಡಲಾಗಿದ್ದು, ಶೀಘ್ರದಲ್ಲಿಯೇ ಲೋಕಾರ್ಪಣೆ ಮಾಡಲಾಗುವುದು ಎಂದರು.
12 ತಿಂಗಳಲ್ಲಿ ಈ ಉಪಕೇಂದ್ರದ ಕಾಮಗಾರಿ ಪೂರ್ಣಗೊಳಿಸಿ ಉಸ್ತುವಾರಿ ಸಚಿವರಿಂದಲೇ ಉದ್ಘಾಟನೆ ಮಾಡಿಸಲಾಗುವುದು. ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹಕಾರದಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದರು.
ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ ಮಾತನಾಡಿ, ಲಕ್ಯಾ ಹೋಬಳಿಯ ಜನರ ದಶಕದ ಕನಸು ಈಡೇರುವ ಶುಭ ಕೆಲಸ ಇಂದು ನೆರವೇರಿದೆ. ಇದಕ್ಕೆ ಸ್ಥಳಾವಕಾಶ ಮಾಡಿಕೊಟ್ಟ ಗಾಣದಾಳು ಗ್ರಾಮಸ್ಥರಿಗೆ ಧನ್ಯವಾದ. ಗ್ರಾಪಂ ಪಶು ಆಸ್ಪತ್ರೆಗೂ ಇಲ್ಲಿಯೇ ಸ್ಥಳಾವಕಾಶ ಕಲ್ಪಿಸಿಕೊಡಬೇಕಿದೆ. ಇನ್ನು ಈ ಭಾಗಕ್ಕೆ ಶಾಶ್ವತ ಬಹುಗ್ರಾಮ ಕುಡಿಯುವ ನೀರು ಯೋಜನೆ ಆಗಬೇಕಿದ್ದು. ಅದಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಶಾಸಕರ ಬಳಿ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net