ಅಪಘಾತ ರಹಿತ ಕ್ಷೇತ್ರವನ್ನಾಗಿಸಲು ಪ್ರಯತ್ನ

17
Published on

ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 482 ಕಿ.ಮೀ. ರಸ್ತೆಗಳನ್ನು ಸಂಪೂರ್ಣವಾಗಿ ಡಾಂಬರೀಕರಣ ಮಾಡಲು ಚಾಲನೆ ನೀಡಲಾಗಿದ್ದು, ಅದರ ಮುಂದುವರಿದ ಭಾಗವಾಗಿ ಮಂಗಳವಾರ ಮತ್ತಷ್ಟು ರಸ್ತೆಗಳ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಎಸ್.ಎ.ರಾಮದಾಸ್ ಚಾಲನೆ ನೀಡಿದರು.


ಅಂದಾಜು ಐದು ಕೋಟಿ ರೂ. ವೆಚ್ಚದಲ್ಲಿ ವಾರ್ಡ್ ನಂ.59ರ ವಿವೇಕಾನಂದ ನಗರದಿಂದ ರಾಮಕೃಷ್ಣನಗರಕ್ಕೆ ಸಂಪರ್ಕ ಕಲ್ಪಿಸುವ ಎಂ.ಬ್ಲಾಕ್ ಅಡ್ಡರಸ್ತೆಗಳ ಡಾಂಬರೀಕರಣ, ವಾರ್ಡ್ ನಂ.64ರ ಅರವಿಂದನಗರ ಭಾಗದ ಎಸ್‌ಬಿಎಂ ಉದ್ಯಾನವನ ಹತ್ತಿರವಿರುವ ಅಡ್ಡರಸ್ತೆಗಳು, ವಾರ್ಡ್ ನಂ.56ರ ಕೃಷ್ಣಮೂರ್ತಿಪುರಂ ಭಾಗದ ಜಯನಗರ ರೈಲ್ವೆ ಗೇಟ್‌ನಿಂದ ಶಾರದವಿಲಾಸ ಕಾಲೇಜು ಸಂಪರ್ಕ ರಸ್ತೆ ಡಾಂಬರಿಕರಣ, ವಾರ್ಡ್ ನಂ.49ರ ಲಕ್ಷ್ಮೀಪುರಂ ಭಾಗದ ಕೃಷ್ಣರಾಜ ಬುಲೆವಾರ್ಡ್ ರಸ್ತೆಯಿಂದ ನ್ಯೂ ಕಾಂತರಾಜ್ ಮುಖ್ಯರಸ್ತೆ ಡಾಂಬರೀಕರಣ, ಬಸವೇಶ್ವರ ರಸ್ತೆ 3,5 ಮತ್ತು 6ನೇ ಅಡ್ಡರಸ್ತೆಗಳ ಡಾಂಬರೀಕರಣ, ವಾರ್ಡ್ ನಂ.55ರ ಚಾಮುಂಡಿಪುರಂ ಭಾಗದ ಬಸವೇಶ್ವರ ರಸ್ತೆ 14 ಮತ್ತು ಸಿಹಿ ನೀರು ಕಟ್ಟೆ ರಸ್ತೆಗಳ ಅಡ್ಡರಸ್ತೆಗಳಲ್ಲಿ ರಸ್ತೆ ಡಾಂಬರೀಕರಣ, ಜೆಎಲ್ಬಿ ಮುಖ್ಯ ರಸ್ತೆಯಿಂದ 3ನೇ ಮೇನ್ ಮುಖ್ಯ ರಸ್ತೆಯ ಮಾರ್ಗವಾಗಿ ಸಾರ್ವಜನಿಕ ಹಾಸ್ಟೆಲ್ ಮುಖ್ಯರಸ್ತೆ ವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಯಿತು.

ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಈವರೆಗೆ ಕ್ಷೇತ್ರದ ಬಹುತೇಕ ಮುಖ್ಯರಸ್ತೆಗಳು ಡಾಂಬರೀಕರಣ ಗೊಂಡಿದ್ದು, ಅದರೊಂದಿಗೆ ಕ್ರಾಸ್ ರಸ್ತೆಗಳನ್ನೂ ಡಾಂಬರೀಕರಣಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮಾತ್ರವಲ್ಲ, ಇದರೊಂದಿಗೆ ಚರಂಡಿ ಅಭಿವೃದ್ಧಿ ಕಾರ್ಯ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಇಡೀ ಕ್ಷೇತ್ರವನ್ನು ಅಪಘಾತ ರಹಿತ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಕೆಲಸ ಸಾಗಿದ್ದು, ಮಾರ್ಚ್ 15ರೊಳಗೆ ಎಲ್ಲ ಕೆಲಸಗಳು ಪೂರ್ಣಗೊಳ್ಳಲಿವೆ ಎಂದು ಹೇಳಿದರು. ಕ್ಷೇತ್ರವನ್ನು ಅಪಘಾತ ಮುಕ್ತ ವಲಯವಾಗಿ ಮಾಡುವ ನಿಟ್ಟಿನಲ್ಲಿ ಬ್ಲಾಕ್‌ಸ್ಪಾಟ್‌ಗಳನ್ನು ಗುರುತಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಈ ಕ್ಷೇತ್ರ ಮಾದರಿಯಾಗಿ ಇರಬೇಕು ಎಂಬ ಕಾರಣಕ್ಕಾಗಿ ಅತ್ಯಂತ ವ್ಯವಸ್ಥಿತವಾಗಿ ಎಲ್ಲ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net