ಭೂಹೀನರಿಗೆ ಭೂಮಿ ಕೊಡಿಸುವ ಪ್ರಯತ್ನ ನಿರಂತರ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ

19sgr5
ಸಾಗರದಲ್ಲಿ ಆನಂದಪುರ ಹೋಬಳಿ ಅಭಿಮಾನಿಗಳು ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಕಾಗೋಡು ತಿಮ್ಮಪ್ಪ ಅವರನ್ನು ಸನ್ಮಾನಿಸಿದರು. ರತ್ನಾಕರ ಹೊನಗೋಡು, ಮೋಹನ್ ಕುಮಾರ್, ರೂಪಾ, ರೇಣುಕಮ್ಮ ಇತರರಿದ್ದರು.
Published on

ಸಾಗರ: ದೇವರಾಜ ಅರಸು ಪ್ರಶಸ್ತಿಗೆ ಭಾಜನನಾಗಿರುವುದು ಅತೀವ ಸಂತೋಷ ಉಂಟು ಮಾಡಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸಂತಸ ವ್ಯಕ್ತಪಡಿಸಿದರು.

ಜೋಸೆಫ್ ನಗರದ ಸ್ವಗೃಹದಲ್ಲಿ ಶನಿವಾರ ಆನಂದಪುರಂ ಹೋಬಳಿ ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನಾನು ಮೊದಲ ಬಾರಿಗೆ ಶಾಸಕನಾಗಿದ್ದಾಗ ಗೇಣಿ ರೈತರಿಗೆ ಭೂಮಿಹಕ್ಕು ಕೊಡಿಸಬೇಕು ಎಂದು ಸಂಕಲ್ಪ ಮಾಡಿದ್ದೆ. ಅದಕ್ಕೆ ಪೂರಕವಾಗಿ ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದರು. ಅವರಿಗೆ ಗೇಣಿದಾರರ ಸ್ಥಿತಿಗತಿ ವಿವರಿಸಿದಾಗ ಅವರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರುವ ವಿಶೇಷ ಆಸಕ್ತಿ ವಹಿಸಿದ್ದರು. ಇದರಿಂದ 1972ರಲ್ಲಿ ಉಳುವವನೆ ಹೊಲದೊಡೆಯ ಕಾಯ್ದೆ ಜಾರಿಗೆ ಬಂದಿತ್ತು. ಅಂದಿನಿಂದ ಇಂದಿನವರೆಗೂ ಭೂಹೀನರಿಗೆ ಭೂಮಿ ಕೊಡಿಸುವ ನನ್ನ ಪ್ರಯತ್ನ ಮುಂದುವರೆದಿದೆ. ನಾನು ಎಂದೆಂದಿಗೂ ಶೋಷಿತರ, ಬಡವರ ಜತೆಯಲ್ಲಿ ಇದ್ದೇನೆ ಎಂದರು.
ಜಿಪಂ ಮಾಜಿ ಸದಸ್ಯ ರತ್ನಾಕರ ಹೊನಗೋಡು ಮಾತನಾಡಿ, ದೇವರಾಜ ಅರಸು ಅವರ ಹೆಸರಿನ ಪ್ರಶಸ್ತಿ ಕಾಗೋಡು ತಿಮ್ಮಪ್ಪ ಅವರಿಗೆ ಸಂದಿರುವುದು ಹೆಚ್ಚು ಅರ್ಥಪೂರ್ಣವಾಗಿದ್ದು ಪ್ರಶಸ್ತಿಯ ಮೌಲ್ಯ ಹೆಚ್ಚಿದೆ. ರಾಜಕೀಯ ಬದುಕಿನುದ್ದಕ್ಕೂ ಭೂಹೀನರ ಪರವಾದ ದನಿಯಾಗಿ ಕಾಗೋಡು ತಿಮ್ಮಪ್ಪ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಆನಂದಪುರ ಗ್ರಾಪಂ ಅಧ್ಯಕ್ಷ ಮೋಹನ್ ಕುಮಾರ್, ಉಪಾಧ್ಯಕ್ಷೆ ರೂಪಾ, ಯಡೇಹಳ್ಳಿ ಗ್ರಾಪಂ ಅಧ್ಯಕ್ಷೆ ರೇಣುಕಮ್ಮ, ಉಪಾಧ್ಯಕ್ಷ ನಾರಿ ಲೋಕಪ್ಪ, ಗೌತಮಪುರ ಗ್ರಾಪಂ ಉಪಾಧ್ಯಕ್ಷ ಅಶೋಕ್, ಪ್ರಮುಖರಾದ ಭರ್ಮಪ್ಪ ಅಂದಾಸುರ, ಗಣಪತಿ ಇರುವಕ್ಕಿ, ಪರಮೇಶಿ ಕಣ್ಣೂರು, ನವೀನ. ರವಿ ಗೌಡ, ನೇತ್ರಾವತಿ ಮಂಜುನಾಥ್, ಶಿವಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net