ವಿಜಯವಾಣಿ ಸುದ್ದಿಜಾಲ ಶಿಡ್ಲಘಟ್ಟ
ಬಿತ್ತನೆ ಬೀಜ, ರಸಗೊಬ್ಬರ ವಿತರಣೆ ಸೇರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘ (ಕೆ.ಎಸ್.ಪುಟ್ಟಣ್ಣಯ್ಯ ಬಣ)ದ ಪದಾಧಿಕಾರಿಗಳು ತಹಸೀಲ್ದಾರ್ ಗಗನಸಿಂಧು ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಸದ್ಯ ಮಳೆ ಉತ್ತಮವಾಗಿದ್‌ದು, ಕೃಷಿ ಇಲಾಖೆ ಹಾಗೂ ಖಾಸಗಿ ಅಂಗಡಿಗಳಲ್ಲಿ ಗೊಬ್ಬರ ಮತ್ತು ಬೀಜ ಹಂಚಿಕೆಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಕೆರೆ ಮತ್ತು ರಾಜಕಾಲುವೆಗಳು ಒತ್ತುವರಿಯಾಗಿದ್ದು, ಒತ್ತುವರಿ ತೆರವುಗೊಳಿಸಿ, ಸರಾಗವಾಗಿ ನೀರು ಹರಿಯಲು ಕ್ರಮ ಕೈಗೊಳ್ಳಬೇಕು. 10-15 ವರ್ಷಗಳಿಂದ ಸಾಗುವಳಿ ಚೀಟಿ ಕೊಡದೆ, 30 ವರ್ಷಗಳಿಂದ ದುರಸ್ತಿ ಮಾಡದಿರುವುದರಿಂದ ರೈತರು ತಾಲೂಕು ಕಚೇರಿಗೆ ತಿರುಗುವಂತಾಗಿದ್ದು, ತಕ್ಷಣ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ತಾಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ರೈತರ ಒಪ್ಪಿಗೆ ಇಲ್ಲದೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಸರ್ಕಾರ ತಡೆ ನೀಡಬೇಕು. ರೈತರ ಪಂಪ್‌ಸೆಟ್‌ಗಳಿಗೆ ನಿರಂತರ 7 ಗಂಟೆ ವಿದ್ಯುತ್ ಸರಬರಾಜು, ಗುಂಡುತೋಪುಗಳ ಒತ್ತುವರಿ ತೆರವುಗೊಳಿಸಿ ಗಿಡ ನೆಡುವುದರ ಜತೆಗೆ ರೈತರ ಸಮಸ್ಯೆಗಳನ್ನು ಪರಿಹರಿಸಬೇಕು. ಅದಕ್ಕಾಗಿ ರೈತರ ಸಭೆ ಕರೆಯಬೇಕು ಎಂದರು.
ಸಂಘದ ಜಿಲ್ಲಾಧ್ಯಕ್ಷ ಟಿ.ಕೆ.ಅರುಣ್ ಕುಮಾರ್, ತಾಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಜಿಲ್ಲಾ ಗೌರವಾಧ್ಯಕ್ಷ ಭಕ್ತರಹಳ್ಳಿ ಕೋಟೆ ಚನ್ನೇಗೌಡ, ಶಂಕರನಾರಾಯಣ, ದ್ಯಾವಪ್ಪ, ಕೃಷ್ಣಪ್ಪ, ಶ್ರೀನಾಥ್, ರಾಮಾಂಜಿ, ಲಗುಮಪ್ಪ, ನಾರಾಯಣಸ್ವಾಮಿ, ಶ್ರೀನಿವಾಸ್, ಲೋಕೇಶ್, ಮನೋಜ್ ಕುಮಾರ್, ಗೌತಮ್, ನಾಗರಾಜ ಇದ್ದರು.