ಭೋವಿ ಸಮಾಜದ ಬೇಡಿಕೆ ಈಡೇರಿಕೆಗೆ ಪ್ರಯತ್ನ

Efforts to fulfill the demand of Bhovi Samaj
Efforts to fulfill the demand of Bhovi Samaj
Published on

ಬಾದಾಮಿ: ಭೋವಿ ಸಮಾಜದ ಪ್ರಮುಖ ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದ್ದು, ಇನ್ನುಳಿದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಪಟ್ಟಣದ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಮಂಗಳವಾರ ಸಿದ್ಧರಾಮೇಶ್ವರ ಭೋವಿ (ವಡ್ಡರ) ಸಮಾಜ ದಿಂದ ಹಮ್ಮಿಕೊಂಡಿದ್ದ ಸಿದ್ಧರಾಮೇಶ್ವರ 852ನೇ ಜಯಂತಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭೋವಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಲು ಸ್ವಾಮೀಜಿ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದರು.

ಭೋವಿ ಸಮಾಜದವರು ಬಹಳ ಶ್ರಮಿಕರು. ಬೇರೆಯವರ ಮನೆ ಕಟ್ಟುವ ನೀವು ಸಹ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದುವರಿಯಬೇಕು. ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು ಎಂದರು.

ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ ಮಾತನಾಡಿ, ಸರ್ಕಾರ ಭೋವಿ ಸಮಾಜದ ಅಭಿವೃದ್ಧಿಗಾಗಿ ನಿಗಮ ಸ್ಥಾಪನೆ ಮಾಡಿದ್ದು, ಸಮಾಜ ಬಾಂಧವರು ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ನೈಋತ್ಯ ರೈಲ್ವೆ ವಿಭಾಗದ ನಾಮನಿರ್ದೇಶಿತ ಸದಸ್ಯ ಅಶೋಕ ಲಿಂಬಾವಳಿ ಮಾತನಾಡಿ, ಭೋವಿ ಅಭಿವೃದ್ಧಿ ನಿಗಮಕ್ಕೆ ಬರುವ ಬಜೆಟ್‌ನಲ್ಲಿ 500 ಕೋಟಿ ರೂ. ಅನುದಾನ ನೀಡಬೇಕು ಎಂದು ಮನವಿ ಮಾಡಿದರು.

ಯುವಮುಖಂಡ ಮಹೇಶ ಹೊಸಗೌಡ್ರ, ಚಿತ್ರದುರ್ಗ- ಬಾಗಲಕೋಟೆ ಭೋವಿ ಗುರುಪೀಠ ಮಹಾಸಂಸ್ಥಾನ ಮಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳು, ಸಿದ್ದನಕೊಳ್ಳದ ಡಾ.ಶಿವುಕುಮಾರ ಮಹಾಸ್ವಾಮಿಗಳು ಮಾತನಾಡಿದರು.

ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಪುರಸಭೆ ಅಧ್ಯಕ್ಷ ಪಾಂಡಪ್ಪ ಕಟ್ಟಿಮನಿ, ಸಮಾಜದ ಅಧ್ಯಕ್ಷ ಸೋಮಪ್ಪ ದೊಡಮನಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವುಕುಮಾರ ಹಿರೇಮಠ, ಸದಸ್ಯ ಶಿವಪ್ಪ ವಡ್ಡರ, ತಹಸೀಲ್ದಾರ್ ಮಧುರಾಜ್ ಕೆ., ಪಿಎಸ್‌ಐ ವಿಠ್ಠಲ ನಾಯಕ, ಪುರಸಭೆ ಮುಖ್ಯಾಧಿಕಾರಿ ಬಂದೇನವಾಜ ಡಾಂಗೆ, ಪುರಸಭೆ ಸದಸ್ಯರಾದ ಮಂಜುನಾಥ ಹೊಸಮನಿ, ರಾಜಮಹ್ಮದ ಬಾಗವಾನ, ನಾಗರಾಜ ಕಾಚೆಟ್ಟಿ, ಪದ್ಮಾವತಿ ವಡ್ಡರ, ಮುಖಂಡರಾದ ಬಸವರಾಜ ಪಾತ್ರೋಟ, ಪುಂಡಲೀಕ ಕವಡಿಮಟ್ಟಿ, ರಾಮಣ್ಣ ಪಾತ್ರೋಟ ಇದ್ದರು.

ಉಪನ್ಯಾಸಕ ಅರವಿಂದ ವಡ್ಡರ ಸಿದ್ಧರಾಮೇಶ್ವರ ಕುರಿತು ಅತಿಥಿ ಉಪನ್ಯಾಸ ನೀಡಿದರು. ಸದಾಶಿವ ಮರಡಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net