

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್) ಪ್ರತಿಷ್ಠಿತ ಸಂಸ್ಥೆಯಾಗಿದೆ. ಇಲ್ಲಿನ ಸಿಬ್ಬಂದಿ ಉತ್ತಮ ಸೇವೆ ನೀಡುತ್ತಿದ್ದು, ಸಂಸ್ಥೆಯ ಎಲ್ಲ ಬೇಡಿಕೆಗಳ ಈಡೇರಿಕೆಗೆ ಪ್ರಯತ್ನಿಸಲಾಗುವುದು ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.
ನಗರದ ಡಿಮ್ಹಾನ್ಸ್ ಸಂಸ್ಥೆಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ಸಚಿವರು, ಸಂಸ್ಥೆಗೆ ಬೇಕಿರುವ ಬೇಡಿಕೆಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿ ಪರಿಶೀಲನೆ ನಡೆಸಿದ ಬಳಿಯ ಆದ್ಯತೆ ಮೇರೆಗೆ ಕ್ರಮಕೈಗೊಳ್ಳಲಾಗುವುದು. ಇದರ ಜತೆಗೆ ಇನ್ನೂ ಹೆಚ್ಚಿನ ಸೌಕರ್ಯಗಳನ್ನು ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದರು.
ಇದಕ್ಕೂ ಪೂರ್ವದಲ್ಲಿ ಸಂಸ್ಥೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಸಂಸ್ಥೆಯಲ್ಲಿನ ಸೌಕರ್ಯ, ಕಾರ್ಯವೈಖರಿ, ಸಿಬ್ಬಂದಿ ಸಂಖ್ಯೆ, ಜಾರಿಗೊಳಿಸಿರುವ ಯೋಜನೆಗಳು ಸೇರಿ ಸಂಪೂರ್ಣ ಮಾಹಿತಿ ಪಡೆದರು. ಇದೇ ಸಂದರ್ಭದಲ್ಲಿ 30 ಹಾಸಿಗೆಯುಳ್ಳ ಡಿ-ಅಡಿಕ್ಷನ್ ವಾರ್ಡ್, 30 ಹಾಸಿಗೆಯ ಮಕ್ಕಳ ವಾರ್ಡ್, 60 ವಿದ್ಯಾರ್ಥಿಗಳ ವೈದ್ಯಕಿಯ ಪಿಜಿ ವಸತಿ ನಿಲಯ ಸೇರಿ ಸುಮಾರು 40 ಕೋಟಿ ರೂ. ಮೊತ್ತ ವಿವಿಧ ಯೋಜನೆಗಳ ಪ್ರಸ್ತಾವನೆ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೆಲ ಯೋಜನೆಗಳಿಗೆ ವಿವಿಧ ಕಂಪನಿಗಳ ಸಿಎಸ್ಆರ್ ಅಡಿ ಸ್ಥಳಿಯವಾಗಿಯೇ ಪ್ರಯತ್ನಿಸಿ. ಅದು ಸಾಧ್ಯವಾಗದೇ ಇದ್ದಲ್ಲಿ ಪ್ರಸ್ತಾವನೆ ಸಲ್ಲಿಸಿದರೆ ಆದ್ಯತೆಯ ಮೇರೆಗೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಸಂಸ್ಥೆಯ ಆಡಳಿತ ಅಧಿಕಾರಿ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ನಿರ್ದೇಶಕ ಅರುಣಕುಮಾರ ಸಿ., ವೈದ್ಯಕಿಯ ಅಧೀಕ್ಷಕ ಡಾ. ರಾಘವೇಂದ್ರ ನಾಯಕ, ವಿವಿಧ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿ, ಇತರರು ಇದ್ದರು.