

ಕಡೂರು: ಪತ್ರಿಕೆಗಳು ವಿರೋಧ ಪಕ್ಷಗಳಂತೆ ಸದಾ ಆಡಳಿತ ವ್ಯವಸ್ಥೆಯನ್ನು ಎಚ್ಚರಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ತಾಲೂಕು ಪತ್ರಕರ್ತರ ಸಂಘ ಸೋಮವಾರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾಧ್ಯಮಗಳು ಇರುವುದರಿಂದ ಭ್ರಷ್ಟಚಾರ ಮತ್ತು ಹಗರಣಗಳ ಸಂಖ್ಯೆ ಕಡಿಮೆಯಾಗಿ ಸ್ವಾಸ್ಥೃ ಸಮಾಜ ನಿರ್ಮಾಣಕ್ಕೆ ನಾಂದಿಯಾಗಿದೆ. ಅತೀರೇಕದ ವರ್ತನೆಯಿಂದ ದೃಶ್ಯ ಮಾಧ್ಯಮಗಳು ಜನರ ನಂಬಿಕೆ ಕಳೆದುಕೊಳ್ಳುತ್ತಿವೆ. ಇದರ ನಡುವೆಯೂ ಮುದ್ರಣಾ ಮಾಧ್ಯಮಗಳು ತಮ್ಮ ವಿಶ್ವಾರ್ಸತೆ ಉಳಿಸಿಕೊಂಡಿವೆ. ಪತ್ರಕರ್ತರ ಸಮಸ್ಯೆಗಳಿಗೆ ಧ್ವನಿಯಾಗಿ ಕಾರ್ಯನಿರ್ವಹಿಸುತ್ತೇನೆ. ತಾಲೂಕಿನಲ್ಲಿ ಪತ್ರಿಕಾ ಭವನಕ್ಕೆ ನಿವೇಶನ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಯಾವುದೇ ಹೊಸ ಸೌಲಭ್ಯ ಅಥವಾ ಯೋಜನೆ ಪ್ರಕಟವಾದರೆ ಅದನ್ನು ಜಿಲ್ಲಾ ಕೇಂದ್ರಕ್ಕೆ ತೆಗೆದುಕೊಂಡು ಹೋಗುವ ಪರಿಪಾಠ ಮೊದಲಿನಿಂದ ನಡೆದುಕೊಂಡು ಬಂದಿದೆ. ಈ ಮನೋಭಾವ ಬದಲಾಗಿ ಜಿಲ್ಲೆಯಲ್ಲೆ ಅತ್ಯುತ್ತಮ ಸಂಪರ್ಕ ವ್ಯವಸ್ಥೆ ಹೊಂದಿರುವ ಕಡೂರಿನಲ್ಲಿಯೂ ಯೋಜನೆಗಳನ್ನು ಅನುಷ್ಠಾನ ಮಾಡಲು ಸರ್ಕಾರ ಮುಂದಾಗಬೇಕು. ಕಡೂರು ಮತ್ತೆ ಜಿಲ್ಲಾ ಕೇಂದ್ರವಾಗಬೇಕು ಎಂಬುದು ನಮ್ಮ ಆಶಯ. ಬಯಲು ಭಾಗದ ತಾಲೂಕುಗಳನ್ನೊಳಗೊಂಡ ಕಡೂರು ಜಿಲ್ಲೆ ಸ್ಥಾಪನೆಗೆ ನನ್ನ ಪ್ರಯತ್ನ ಆರಂಭವಾಗಿದೆ. ಇದಕ್ಕಾಗಿ ಜನಾಭಿಪ್ರಾಯ ರೂಪಿಸಲು ಚಿಂತನೆಯಿದೆ ಎಂದರು.
ಹಿರಿಯ ಪತ್ರಕರ್ತ ಕೆ.ಎನ್.ಕೃಷ್ಣಮೂರ್ತಿ ಅವರಿಗೆ ಪತ್ರಕರ್ತ ಪ್ರಶಸ್ತಿ ಪ್ರಧಾನ ಮಾಡಲಾಯಿತು. ತಾಲೂಕು ಸಂಘದ ಅಧ್ಯಕ್ಷ ಎಂ.ಎನ್.ಜಗದೀಶ್,ಜಿಲ್ಲಾಧ್ಯಕ್ಷ ಜಿ.ಎಂ. ರಾಜಶೇಖರ್, ಎನ್.ಪಿ.ಮಂಜುನಾಥ ಪ್ರಸನ್ನ, ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ, ತಾಪಂ ಇಒ ಸಿ.ಆರ್.ಪ್ರವೀಣ್, ಎ.ಜೆ.ಪ್ರಕಾಶ್‌ಮೂರ್ತಿ, ಓಂಕಾರಮೂರ್ತಿ ಮತ್ತಿತರಿದ್ದರು.