ಅನರ್ಹ ಬಿಪಿಎಲ್​ ಕಾರ್ಡ್​ ರದ್ದು ಪಡಿಸಲು ತಲಾಶ್​!

rationcard
Published on

* ಜಿಲ್ಲೆಯಲ್ಲಿ 2736 ಎಪಿಎಲ್​ ಆಗಿ ಬದಲು

* 14 ಮಾನದಂಡದಂತೆ ಪಡಿತರ ಚೀಟಿ ರದ್ದು

ಗಂಗಾಧರ್​ ಬೈರಾಪಟ್ಟಣ ರಾಮನಗರ

ಅನರ್ಹ ಬಿಪಿಎಲ್​ ಕಾರ್ಡ್​ದಾರನ್ನು ಗುರುತಿಸುವ ಕೆಲಸ ಪ್ರಗತಿಯಲ್ಲಿದ್ದು, ಜಿಲ್ಲೆಯಲ್ಲಿ ಈವರೆಗೂ ಒಟ್ಟು 2736 ಕಾರ್ಡ್​ಗಳನ್ನು ಎಪಿಎಲ್​ ಕಾರ್ಡ್​ಗಳಾಗಿ ಬದಲಿಸಲಾಗಿದೆ.

ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಕ್ರಮ ಪಡಿತರ ಚೀಟಿ ಪಡೆದುಕೊಳ್ಳಲಾಗಿದೆ ಎನ್ನುವ ಆರೋಪಗಳು ಪದೇಪದೆ ಕೇಳಿ ಬರುತ್ತಿದ್ದವು. ಇದಕ್ಕೆ ಪೂರಕ ಎನ್ನುವ ಆಹಾರ ಇಲಾಖೆಯಲ್ಲಿನ ಕುಟುಂಬ ತಂತ್ರಾಂಶವು ಅನರ್ಹರನ್ನು ಹುಡುಕಿಕೊಟ್ಟ ಪರಿಣಾಮ ರಾಜ್ಯದಲ್ಲಿ ಲಾಂತರ ಮಂದಿಗೆ ಬಿಪಿಎಲ್​ ಪಡಿತರ ಚೀಟಿ ಕೈ ತಪ್ಪಲಿದೆ. ಈಗಾಗಲೇ ಇದರ ಕಾರ್ಯ ಪ್ರಗತಿಯಲ್ಲಿದ್ದು, ಜಿಲ್ಲೆಯಲ್ಲಿ ಈವರೆಗೂ ಒಟ್ಟು 2736 ಬಿಪಿಎಲ್​ ಪಡಿತರ ಚೀಟಿಗಳನ್ನು ಎಪಿಎಲ್​ ಪಡಿತರ ಚೀಟಿಗಳಾಗಿ ಬದಲಾವಣೆ ಮಾಡಲಾಗಿದೆ.

ಯಾವುದು ಎಷ್ಟೆಷ್ಟು ?

ಜಿಲ್ಲೆಯಲ್ಲಿ ಒಟ್ಟು 2.95 ಲಕ್ಷ ಅಂತ್ಯೋದಯ ಮತ್ತು ಬಿಪಿಎಲ್​ ಪಡಿತರ ಚೀಟಿದಾರರು ಇದ್ದಾರೆ. ಆದರೆ, ಇವರಲ್ಲಿ ಎಪಿಎಲ್​ ಕಾರ್ಡ್​ಗಳನ್ನು ಹೊಂದಲು ಅರ್ಹರಿರುವವರೂ ವಿವಿಧ ಮಾರ್ಗಗಳ ಮೂಲಕ ಬಿಪಿಎಲ್​ ಇಲ್ಲವೇ, ಅಂತ್ಯೋದಯ ಕಾರ್ಡ್​ ಪಡೆದುಕೊಂಡಿದ್ದಾರೆ. ಇವರಲ್ಲಿ ಸರ್ಕಾರಿ ನೌಕರಿಯಲ್ಲಿ ಇರುವವರೂ ಸೇರಿರುವುದು ಆಶ್ಚರ್ಯ. ಜಿಲ್ಲೆಯಲ್ಲಿ ಅಂತ್ಯೋದಯ ಕಾರ್ಡ್​ ಹೊಂದಿರುವ 11,873, ಆದಾಯ ತೆರಿಗೆ ಪಾವತಿ ಮಾಡುತ್ತಿರುವ 3406, ವಾರ್ಷಿಕ ಆದಾಯ 1.20 ಲಕ್ಷ ರೂ. ಮೀರಿರುವ 10933 ಮತ್ತು ಸರ್ಕಾರಿ ನೌಕರರ 93 ಕುಟುಂಬಗಳು ಸೇರಿ ಒಟ್ಟು 26305 ಅಕ್ರಮ ರೇಷನ್​ ಕಾರ್ಡ್​ಗಳು ಇವೆ.

ಸದ್ಯಕ್ಕೆ ಆಗಿರುವುದಿಷ್ಟು

ಜಿಲ್ಲೆಯಲ್ಲಿ ಸದ್ಯಕ್ಕೆ 6 ತಿಂಗಳಿಂದ ಪಡಿತರ ಪಡೆಯದ ಅಂತ್ಯೋದಯ ಮತ್ತು ಬಿಪಿಎಲ್​ ಒಟ್ಟು 9358 ಕಾರ್ಡ್​ಗಳನ್ನು ಅಮಾನತ್ತಿನಲ್ಲಿಡಲಾಗಿದೆ. ಉಳಿದಂತೆ ಸರ್ಕಾರಿ ನೌಕರರ ಎಚ್​ಆರ್​ಎಂಎಸ್​ನಲ್ಲಿ ಇರುವ 91, ಆದಾಯ ತೆರಿಗೆ ಪಾವತಿ ಮಾಡುತ್ತಿರುವ 1571 ಹಾಗೂ 1.2 ಲಕ್ಷ ರೂ. ಗಿಂತ ಹೆಚ್ಚು ಆದಾಯ ಹೊಂದಿರುವ 74 ಕಾರ್ಡ್​ಗಳನ್ನು ರದ್ದುಪಡಿಸಲಾಗಿದೆ.

ಸೂಕ್ತ ದಾಖಲೆ ತೋರಿಸಿ

ಬಿಪಿಎಲ್​ ಮತ್ತು ಅಂತ್ಯೋದಯ ಕಾರ್ಡ್​ ಹೊಂದಿರುವವರಲ್ಲಿ ಬಹುತೇಕ ಮಂದಿ ಪಡಿತರಕ್ಕಿಂತ ಸರ್ಕಾರದ ಇತರ ಯೋಜನೆಗಳ ಲಾಭ ಪಡೆದುಕೊಳ್ಳಲು ಇವುಗಳನ್ನು ಬಳಕೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕುಟುಂಬ ತಂತ್ರಾಂಶವು 6 ತಿಂಗಳಿಂದ ಪಡಿತರ ಪಡೆಯದ ಇಂತಹ ಕಾರ್ಡ್​ಗಳನ್ನು ಪತ್ತೆ ಮಾಡಿದೆ. ಜಿಲ್ಲೆಯಲ್ಲಿ ಈವರೆಗೂ ಒಟ್ಟು 9,358 ಕಾರ್ಡ್​ದಾರರು 6 ತಿಂಗಳಿಂದ ಪಡಿತರ ಪಡೆದುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಇವುಗಳನ್ನು ಅಮಾನತ್ತಿನಲ್ಲಿ ಇಡಲಾಗಿದೆ. ಒಂದು ವೇಳೆ ಇವುಗಳನ್ನು ಮತ್ತೆ ಬಿಪಿಎಲ್​ ಇಲ್ಲವೇ ಎಎವೈ ಅಡಿ ಮರು ಚಾಲನೆ ನೀಡಬೇಕಾದರೆ ಬಡತನ ರೇಖೆಗಿಂತ, ಇಲ್ಲವೆ ಕಡು ಬರುವರು ಎನ್ನುವ ಬಗ್ಗೆ ದಾಖಲೆಗಳನ್ನು ಕೊಡಬೇಕು ಹಾಗೂ ಯಾವ ಕಾರಣಕ್ಕೆ ಕಳೆದ 6 ತಿಂಗಳಿಂದ ಪಡಿತರ ಪಡೆದುಕೊಂಡಿಲ್ಲ ಎನ್ನುವುದನ್ನು ದಾಖಲೆ ಮೂಲಕ ತಿಳಿಸಬೇಕಿದೆ. ದಾಖಲೆಗಳು ಸೂಕ್ತ ಎನಿಸಿದರಷ್ಟೇ ಅಂತಹ ಕಾರ್ಡ್​ಗಳ ಅಮಾನತ್ತು ರದ್ದಾಗಲಿದೆ.

14 ಮಾನದಂಡ

ವಾರ್ಷಿಕ 1.20 ಲಕ್ಷ ರೂ.ಗಿಂತ ಹೆಚ್ಚು ಆದಾಯ ಪಡೆಯುತ್ತಿರುವವರ, ಮನೆಯಲ್ಲಿ ಕಾರು ಹೊಂದಿರುವ, ಆದಾಯ ತೆರಿಗೆ ಪಾವತಿಸುವವರು, 7.5 ಎಕರೆ ಒಣ ಅಥವಾ ನೀರಾವರಿ ಭೂಮಿ ಹೊಂದಿರುವವರು, ಅನುದಾನಿತ, ಅನುದಾನರಹಿತ ಶಾಲಾ & ಕಾಲೇಜು ನೌಕರರು, ನೋಂದಾಯಿತ ಗುತ್ತಿಗೆದಾರರು, ಎಂಎನ್​ಸಿ ಕಂಪನಿ, ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು, ಸ್ವಂತಕ್ಕಾಗಿ ಒಂದು ಆಟೋರಿಾ ಹೊರತುಪಡಿಸಿ 100 ಸಿಸಿ ಮೇಲ್ಪಟ್ಟ ಇಂಧನಚಾಲಿತ ದ್ವಿಚಕ್ರ, ತ್ರಿಚಕ್ರ ಕಾರು ಹೊಂದಿರುವ ಸೇರಿ 14 ಮಾನದಂಡ ಮುಂದಿಟ್ಟುಕೊಂಡು ಬಿಪಿಎಲ್​ ಕಾರ್ಡ್​ ರದ್ದಾಗಲಿವೆ.

ಆದರೆ, ಈ ಮಾನದಂಡವನ್ನು ಪರಿಷ್ಕರಣೆ ಮಾಡಬೇಕು ಎನ್ನುವ ಬೇಡಿಕೆಯೂ ಹೆಚ್ಚಿದೆ. ತಮ್ಮ ದೈನಂದಿನ ವ್ಯಾಪಾರ ವಹಿವಾಟುಗಳಿಗೆ ಅನುಕೂಲವಾಗಲೆಂದು ಪ್ರತಿಯೊಬ್ಬರು ಸಾಲವನ್ನಾದರೂ ಮಾಡಿ ಬೈಕ್​ ಖರೀದಿ ಮಾಡಿರುತ್ತಾರೆ. ಇಂತಹವರನ್ನು ಅನರ್ಹರು ಎನ್ನಲು ಸಾಧ್ಯವೇ ಎನ್ನುವ ಪ್ರಶ್ನೆ ನಾಗರೀಕರದ್ದಾಗಿದೆ. ಅನುದಾನಿತ/ಅನುದಾನರಹಿತ ಶಾಲಾ& ಕಾಲೇಜು ನೌಕರರು, ಕಂಪನಿ ಹಾಗೂ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ 18&20 ಸಾವಿರ ರೂ. ವೇತನ ಸಿಗುತ್ತಿದೆ. ಇವರೆಲ್ಲರೂ ಬಡತನ ರೇಖೆಗಿಂತ ಕೆಳಗಿನವರು. ದೈನಂದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿರುವ ಸಂದರ್ಭದಲ್ಲಿ ಬರುವ ಆದಾಯದಲ್ಲಿ ಬದುಕು ನಡೆಸುವುದು ಕಷ್ಟ. ಇಂಥವರ ಮೇಲೆ ಅವೈಜ್ಞಾನಿಕ ಮಾನದಂಡಗಳನ್ನು ಪ್ರಯೋಗ ಮಾಡುವುದು ಬೇಡ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಸರ್ಕಾರದ ಮಾನದಂಡದಂತೆ ಅನರ್ಹ ಬಿಪಿಎಲ್​ ಮತ್ತು ಎಎವೈ ಪಡಿತರ ಚೀಟಿಗಳನ್ನು ಎಪಿಎಲ್​ ಪಡಿತರ ಚೀಟಿಗಳಾಗಿ ಪರಿವರ್ತನೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಈವರೆವಿಗೂ 2,736 ಕಾರ್ಡ್​ಗಳನ್ನು ಪರಿವರ್ತನೆ ಮಾಡಲಾಗಿದೆ. 6 ತಿಂಗಳಿಂದ ರೇಷನ್​ ಪಡೆಯದ 9,358 ಕಾರ್ಡ್​ಗಳನ್ನು ಅಮಾನತ್ತಿನಲ್ಲಿ ಇಡಲಾಗಿದೆ.ಸಿ.ಆರ್​. ರಮ್ಯಾ, ಉಪನಿರ್ದೇಶಕಿ, ಆಹಾರ, ನಾಗರಿಕ ಸಬರಾಜು ಇಲಾಖೆ

==

ಜಿಲ್ಲೆಯ ಅನರ್ಹ ಕಾರ್ಡ್​ಗಳು

ಸರ್ಕಾರಿ ನೌಕರರು 93

ಎಎವೈ 11,873

ಐಟಿ ಪಾವತಿ 3,406

ಹೆಚ್ಚಿನ ಆದಾಯ 10,933

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net