

ಯಳಂದೂರು: ಪಟ್ಟಣದ ಬಳೇಪೇಟೆಯಲ್ಲಿರುವ ಸೈಯದ್ ಮುರ್ತುಜಾ ಷಾ ಖಾದ್ರಿ ದರ್ಗಾದ ಬಳಿ ಶಾದಿ ಮಹಲ್ ನಿರ್ಮಿಸಿ ಅಲ್ಪಸಂಖ್ಯಾತ ಮುಸ್ಲಿಂ ಜನಾಂಗಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಭರವಸೆ ನೀಡಿದರು.
ಪಟ್ಟಣದ ಜಾಮೀಯಾ ಮಸೀದಿಯಲ್ಲಿ ಶನಿವಾರ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಸರ್ವೇ ನಂ. 53ರಲ್ಲಿ 1.39 ಗುಂಟೆ ಜಮೀನು ಜಾಮೀಯಾ ಮಸೀದಿ ಸುನ್ನಿ ವಕ್ಫ್ ಬೋರ್ಡ್‌ಗೆ ಸೇರಿದೆ. ಪಟ್ಟಣ ಸೇರಿದಂತೆ ಸುತ್ತಮುತ್ತಲಿನಲ್ಲಿ 15 ಸಾವಿರಕ್ಕೂ ಅಧಿಕ ಮುಸ್ಲಿಮರು ವಾಸವಾಗಿದ್ದಾರೆ. ಇವರು ಶೈಕ್ಷಣಿಕ, ಸಾಮಾಜಿಕ ಕಾರ್ಯಕ್ರಮಗಳು, ಮದುವೆ ಇತರ ಕಾರ್ಯಗಳನ್ನು ಮಾಡಲು ದೂರದ ಮೈಸೂರು, ಚಾಮರಾಜನಗರ ಅಥವಾ ಕೊಳ್ಳೇಗಾಲಕ್ಕೆ ತೆರಳುವ ಅನಿವಾರ್ಯತೆ ಇದೆ. ಹಾಗಾಗಿ ನಮಗೆ ಕಮ್ಯುನಿಟಿ ಹಾಲ್ ನಿರ್ಮಿಸಬೇಕು. ಇದಕ್ಕೆ ಶಾಸಕರ ಅನುದಾನದಲ್ಲಿ ಹಣ ನೀಡುವಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುತ್ತೇನೆ. ಕೊಳ್ಳೇಗಾಲದ ಶಾದಿ ಮಹಲ್‌ಗೆ 1 ಕೋಟಿ ರೂ. ಹಣ ನೀಡಿದ್ದೇನೆ. ಇಲ್ಲಿಗೆ 50 ಲಕ್ಷ ರೂ. ಹಣ ಬಿಡುಗಡೆಯಾಗುವ ವಿಶ್ವಾಸವಿದೆ ಎಂದರು.
ಪಪಂ ಸದಸ್ಯ ಮಹೇಶ್, ಜಾಮೀಯಾ ಮಸೀದಿಯ ಅಧ್ಯಕ್ಷ ನಯಾಜ್‌ಖಾನ್, ಧಾರ್ಮಿಕ ಗುರುಗಳಾದ ಅಬ್ರಾರ್ ಅಹಮ್ಮದ್ ಖಾನ್, ನಿಸಾರ್ ಅಹಮ್ಮದ್, ಯಳಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ ಚಂದ್ರು, ಅಲ್ಪಸಂಖ್ಯಾತರ ಬ್ಲಾಕ್ ಅಧ್ಯಕ್ಷ ಮುನವ್ವರ್ ಬೇಗ್, ಇರ್ಫಾನ್, ನವಾಬ್ ಬೇಗ್ ಸೇರಿದಂತೆ ಅನೇಕರು ಇದ್ದರು.