

ಮೈಸೂರು: ಪಾಲಕರು ಮಕ್ಕಳಿಗೆ ಲಸಿಕೆ ಕೊಡಿಸುವ ಮೂಲಕ ಸಂಪೂರ್ಣ ಪೋಲಿಯೋ ನಿರ್ಮೂಲನೆಗೆ ಸಹಕರಿಸಬೇಕು ಎಂದು ರೋಟರಿ ಕ್ಲಬ್ ಆಫ್ ಹೆರಿಟೇಜ್ ಮೈಸೂರು ಅಧ್ಯಕ್ಷ ಆರ್.ರಾಜೇಶ್ ಸಲಹೆ ನೀಡಿದರು.
ವಿಶ್ವ ಪೋಲಿಯೋ ದಿನದ ಅಂಗವಾಗಿ ನಗರದ ಚೆಲುವಾಂಬ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಆಫ್ ಹೆರಿಟೇಜ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಲಸಿಕೆ ಹಾಕಿ ಮಾತನಾಡಿದರು. ಐದು ವರ್ಷದೊಳಗಿನ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಪೋಲಿಯೋ ಲಸಿಕೆ ಕೊಡಿಸುವುದು ಪಾಲಕರ ಜವಾಬ್ದಾರಿಯಾಗಿದೆ. ಲಸಿಕೆ ನೀಡದಿದ್ದರೆ ಮಕ್ಕಳು ಅಂಗವೈಕಲ್ಯತೆಗೆ ತುತ್ತಾಗುವ ಸಂಭವ ಇರುತ್ತದೆ. ಆದ್ದರಿಂದ ತಪ್ಪದೇ ಲಸಿಕೆ ಕೊಡಸಬೇಕೆಂದರು. ಪೋಲಿಯೋ ನಿರ್ಮೂಲನೆಗೆ ರೋಟರಿ ಸಂಸ್ಥೆಯೂ ಜಗತ್ತಿನಾದ್ಯಂತ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸುತ್ತಿದೆ. ಆರ್ಥಿಕವಾಗಿಯೂ ಸಹಕಾರ ನೀಡಿದೆ ಎಂದರು.
ಆಸ್ಪತ್ರೆಗೆ ದಾಖಲಾಗಿರುವ ಸುಮಾರು 50ಕ್ಕೂ ಅಧಿಕ ನವಜಾತ ಶಿಶುಗಳಿಗೆ ಅಗತ್ಯವಿರುವ ಸ್ವೆಟರ್, ಕ್ಯಾಪ್, ಸಾಕ್ಸ್ ಸಹಿತ ಕಿಟ್ ವಿತರಿಸಲಾಗಿದೆ ಎಂದು ಹೇಳಿದರು.
ಸಹಕಾರ ಮುಖ್ಯ: ಚೆಲುವಾಂಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಾಜೇಂದ್ರ ಕುಮಾರ್ ಮಾತನಾಡಿ, ಮನೆ-ಮನೆಗೆ ತೆರಳಿ ಲಸಿಕೆ ಕೊಡಿಸುವ ಕಾರ್ಯಕ್ಕೆ ಸರ್ಕಾರ, ಸಂಘ, ಸಂಸ್ಥೆಗಳು ಮುಂದಾಗಿವೆ. ಆದರೂ ಸಾಕಷ್ಟು ಮಕ್ಕಳು ಲಸಿಕೆ ವಂಚಿತ ರಾಗಿಅಂಗವೈಕಲ್ಯತೆಗೆ ತುತ್ತಾಗುತ್ತಿದ್ದಾರೆ. ಈ ಸಂದರ್ಭ ಪೋಲಿಯೋ ಲಸಿಕೆ ಕುರಿತು ಅರಿವು ಮೂಡಿಸಲು ಎಲ್ಲರೂ ಸಹಕರಿಸಬೇಕು ಎಂದರು.
ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಕೆ.ಮಂಜುನಾಥ್, ಹಿರಿಯ ಸದಸ್ಯರಾದ ನಾರಾಯಣ್ ನಾಯಕ್, ರಾಘವೇಂದ್ರ ಆಚಾರ್, ಚಂದನ್, ಜೀವನಿಧಿ ಟ್ರಸ್ಟ್‌ನ ಆಯೇಷಾ, ಆಸ್ಪತ್ರೆಯ ಕಚೇರಿ ಅಧೀಕ್ಷಕ ದೇವರಾಜು ಇತರರು ಇದ್ದರು.