

ಮಡಿಕೇರಿ: ಚೆಟ್ಟಳ್ಳಿ ಸಮೀಪದ ಕಂಡಕರೆಯಲ್ಲಿ ಮುಸ್ಲಿಂ ಸಮುದಾಯದ ಬಾಂಧವರ ಪವಿತ್ರ ಹಬ್ಬವಾದ ಬಕ್ರೀದ್ ಸಂಭ್ರಮದಿಂದ ಆಚರಿಸಲಾಯಿತು.
ಬಕ್ರೀದ್ ನಮಾಜ್ ನೇತೃತ್ವ ವಹಿಸಿ ಮಾತನಾಡಿದ ಮಹಲ್ ಖತೀಬರಾದ ಮುಸ್ತಫಾ ಸಖಾಫಿ, ಬಕ್ರೀದ್ ಹಬ್ಬವು ಇಡೀ ಪ್ರಪಂಚಕ್ಕೆ ತ್ಯಾಗ ಮತ್ತು ಬಲಿದಾನ ಸಂಕೇತವನ್ನು ಸಾರುತ್ತದೆ. ಬಕ್ರೀದ್ ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸಬೇಕು. ಹಬ್ಬದ ಸಂಭ್ರಮದಲ್ಲಿ ಬಡವರಿಗೆ ಸಹಾಯ ಹಸ್ತ ಚಾಚುವ ಮೂಲಕ ಬಕ್ರೀದ್ ಸಂದೇಶವನ್ನು ಎಲ್ಲರೂ ಎತ್ತಿ ಹಿಡಿಯಬೇಕಾಗಿದೆ. ಇಂದಿನ ದಿನಗಳಲ್ಲಿ ಯುವ ಸಮೂಹ ಆಡಂಬರದ ಜೀವನದಿಂದ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಖೇದಕರ ಸಂಗತಿಯಾಗಿದೆ. ಹಬ್ಬದ ಸಂಭ್ರಮದ ನೆಪದಲ್ಲಿ ಯುವ ಸಮೂಹ ಮದ್ಯಪಾನಕ್ಕೆ ದಾಸರಾಗಬಾರದು. ದುಶ್ಚಟಗಳಿಂದ ಎಲ್ಲರೂ ದೂರವಿರಬೇಕಾಗಿದೆ. ಮದ್ಯಮುಕ್ತ ಸಮಾಜವನ್ನು ನಿರ್ಮಿಸಲು ಪಣತೊಡಬೇಕಾಗಿದೆ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕಂಡಕರೆ ಎಸ್.ಎಸ್.ಎಫ್ ಹಾಗೂ ಎಸ್.ವೈ.ಎಸ್ ವತಿಯಿಂದ ಕುರ್ ಆನ್ ಕಂಠಪಾಠ ಮಾಡಿದ ಕಂಡಕರೆ ಲುಕ್ ಮಾನುಲ್ ಹಕೀಂ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈದ್ ನಮಾಜಿನ ಬಳಿಕ ಮರಣವೊಂದಿದರ ಊರಿನ ಹಿರಿಯರು ಹಾಗೂ ಕಿರಿಯರಿಗಾಗಿ ಮುಸ್ತಫಾ ಸಖಾಫಿ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಪ್ರಾರ್ಥನೆಯ ನಂತರ ಎಲ್ಲರೂ ಪರಸ್ಪರ ಹಸ್ತಲಾಘವ ಮಾಡುವ ಮೂಲಕ ಬಕ್ರೀದ್ ಶುಭಕೋರಿದರು.