ಜಂಬೂಸವಾರಿ ಯಶಸ್ವಿಗೆ ತೆರೆಮರೆಯಲ್ಲಿ ದುಡಿದರು

Jambusavari
Published on
  • ಅರಣ್ಯ ಇಲಾಖೆ, ಪೌರ ಕಾರ್ಮಿಕರ ಪರಿಶ್ರಮ ಅಪಾರ
  • ಯಾವುದೇ ಲೋಪವಾಗದಂತೆ ಎಚ್ಚರ ವಹಿಸಲು ಹಗಲು ಇರುಳು ದುಡಿಮೆ

ಅವಿನಾಶ್ ಜೈನಹಳ್ಳಿ ಮೈಸೂರು
ಪ್ರತಿಯೊಬ್ಬರಿಗೂ ಜಂಬೂಸವಾರಿಯ ವೈಭವ ಮಾತ್ರ ಕಣ್ಣಿಗೆ ಕಾಣುತ್ತದೆ. ಆದರೆ ಜಂಬೂಸವಾರಿ ಮೆರವಣಿಗೆ ಯಶಸ್ವಿಯಾಗಲು ಅದರ ಹಿಂದೆ ನೂರಾರು ಜನರ ಪರಿಶ್ರಮ ಅಡಗಿರುತ್ತದೆ. ಆದರೆ, ಬಹುತೇಕರಿಗೆ ಅವರ ಪರಿಶ್ರಮ ಕಣ್ಣಿಗೆ ಕಾಣುವುದೇ ಇಲ್ಲ. ಈ ರೀತಿ ಮೆರವಣಿಗೆ ಯಶಸ್ವಿಗೆ ಸದ್ದಿಲ್ಲದೆ ದುಡಿದವರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ನಗರ ಪಾಲಿಕೆಯ ಪೌರ ಕಾರ್ಮಿಕರು ಪ್ರಮುಖರು.

ಜಂಬೂಸವಾರಿ ಮೇಲೆ ವಿರಾಜಮಾನಳಾದ ತಾಯಿ ಚಾಮುಂಡೇಶ್ವರಿಯನ್ನು ಕಣ್ತುಂಬಿಕೊಳ್ಳಲು ದೇಶ, ವಿದೇಶದಿಂದ ಲಕ್ಷಾಂತರ ಜನರು ಸಾಂಸ್ಕೃತಿಕ ನಗರಿಗೆ ಆಗಮಿಸಿ ಜಂಬೂಸವಾರಿ ಸಾಗುವ ಹಾದಿಯಲ್ಲಿ ಬೆಳಗ್ಗಿನಿಂದಲೇ ಕಾದು ಕುಳಿತ್ತಿದ್ದರು. ಎಲ್ಲರ ಗಮನ ಅಂಬಾರಿ ಮೇಲೆ ವಿರಾಜಮಾನಳಾದ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿ ಮೇಲೆ ಇತ್ತು. ಆದರೆ, ಪೌರ ಕಾರ್ಮಿಕರು ತಾಯಿ ಚಾಮುಂಡೇಶ್ವರಿಯನ್ನು ಕಣ್ತುಂಬಿಕೊಳ್ಳುವ ಜತೆಗೆ ಜಂಬೂಸವಾರಿ ಸಾಗುವ ಮಾರ್ಗದ ಸ್ವಚ್ಛತೆಯಲ್ಲಿ ತಮ್ಮನ್ನು ತೊಡಗಿಸಿಕೊ ಳ್ಳುವ ಮೂಲಕ ತಮ್ಮ ಕಾಯಕದಲ್ಲಿ ದೇವರನ್ನು ಕಂಡರು.

ಜಂಬೂಸವಾರಿ ಮೆರವಣಿಗೆ ಸಾಗುವ ಸಯ್ಯಜಿರಾವ್ ರಸ್ತೆಯ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಈ ಮಾರ್ಗದ ಸ್ವಚ್ಛತೆಗೆ 290 ಪೌರಕಾರ್ಮಿಕರನ್ನು ನಿಯೋಜನೆ ಮಾಡಲಾಗಿತ್ತು. ಈ ಪೈಕಿ ಮೆರವಣಿ ಸಾಗುವಾಗ 145 ಪೌರ ಕಾರ್ಮಿಕರು ಸ್ವಚ್ಛತೆಯಲ್ಲಿ ಭಾಗಿಯಾದರು. ಇದರಲ್ಲಿ ಪಾಲಿಕೆ 65, ಹೊರ ಗುತ್ತಿದೆ 80 ಪೌರಕಾರ್ಮಿಕರು ಆನೆ ಲದ್ದಿ, ತ್ಯಾಜ್ಯವನ್ನು ತಕ್ಷಣ ತೆರವುಗೊಳಿಸುವ ಮೂಲಕ ಜಂಬೂಸವಾರಿ ಮೆರವಣಿಗೆಯ ಮಾರ್ಗದಲ್ಲಿ ಸ್ವಚ್ಛತೆ ಕಾಪಾಡಿದರು.

ಈ ಮಾರ್ಗದಲ್ಲಿ ಮಾರ್ಗದಲ್ಲಿ ಯುಜಿಡಿ ಸಮಸ್ಯೆ ಕಂಡುಬಂದರೆ ತಕ್ಷಣ ಸರಿಪಡಿಸಲು ನಾಲ್ಕು ಸಕ್ಕಿಂಗ್ ಮತ್ತು ಜಟ್ಟಿಂಗ್ ಯಂತ್ರವನ್ನು ಬಳಕೆ ಮಾಡಲಾಯಿತು. ಕಸ ತುಂಬಲು 10 ಆಟೋ, 4 ಲಾರಿಗಳನ್ನು ಬಳಕೆ ಮಾಡಲಾಯಿತು. ಮೆರವಣಿಗೆ ಮುಗಿದ ಬಳಿಕ ಸ್ವಚ್ಛತಾ ಕಾರ್ಯ ಕೈಗೊಳ್ಳಲು 145 ಪೌರ ಕಾರ್ಮಿಕರನ್ನು ನಿಯೋಜಿಸಲಾಗಿತ್ತು. ಸ್ವಚ್ಛತೆಯಲ್ಲಿ ಪ್ರತಿ ಬಾರಿ ಮೈಸೂರು ದೇಶದ ಗಮನ ಸೆಳೆಯುತ್ತಿದೆ. ಇದಕ್ಕೆ ಪೌರ ಕಾರ್ಮಿಕರ ಪರಿಶ್ರಮ ಅಪಾರವಾದದ್ದು. ಪ್ರತಿ ವರ್ಷ ದಸರಾ ಸಂದರ್ಭದಲ್ಲೂ ಸ್ವಚ್ಛತೆಯಲ್ಲಿ ಯಾವುದೇ ರೀತಿಯ ಲೋಪವಾಗದಂತೆ ಪೌರ ಕಾರ್ಮಿಕರು ದುಡಿಯುತ್ತಾರೆ. ಈ ಬಾರಿಯೂ ಸ್ವಚ್ಛತೆಯಲ್ಲಿ ಯಾವುದೇ ರೀತಿಯ ಲೋಪವಾಗ ದಂತೆ ಪೌರ ಕಾರ್ಮಿಕರು ನೋಡಿಕೊಂಡರು.

ಆನೆಗಳಿಗೆ ಯೋಗ ಕ್ಷೇಮಕ್ಕೆ ಪರಿಶ್ರಮ:
ಜಂಬೂಸವಾರಿ ಮೆರವಣಿಗೆ ಯಶಸ್ವಿಯಾಗಲು ಅರಣ್ಯ ಇಲಾಖೆಯ ಪಾತ್ರ ಅಪಾರವಾದದ್ದು. ಜಂಬೂಸವಾರಿ ಮೆರವಣಿಗೆಗೆ ಆನೆಗಳ ಆಯ್ಕೆ ಮಾಡಲು ಆನೆ ಶಿಬಿರಕ್ಕೆ ತೆರಳುವುದು ಹಾಗೂ ಆಯ್ಕೆಗೊಂಡ ಆನೆಗಳನ್ನು ಅರಮನೆಗೆ ಕರೆ ತರುವುದು ಮತ್ತು ಗಜಪಡೆಯ ತಾಲೀಮು ನಡೆಸಿ ಮೆರವಣಿಗೆಗೆ ಸಜ್ಜುಗೊಳಿಸುವ ಮಹತ್ವದ ಜವಾಬ್ದಾರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ನಿರ್ವಹಿಸುತ್ತಾರೆ. ಇಷ್ಟಕ್ಕೆ ಇವರ ಜವಾಬ್ದಾರಿ ಮುಗಿಯುವುದಿಲ್ಲ. ಜಂಬೂಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಜಂಬೂಸವಾರಿ ಯಶಸ್ವಿಗೆ ಅರಣ್ಯ ಇಲಾಖೆ ಸಿಬ್ಬಂದಿ ಶ್ರಮಿಸಿದರು. ಜಂಬೂಸವಾರಿ ಯಶಸ್ವಿಗೆ ಅರಣ್ಯ ಇಲಾಖೆಯ ಒಟ್ಟು 150 ಸಿಬ್ಬಂದಿ ಕಾರ್ಯನಿರ್ವಹಿಸಿದರು.


ಬುಧವಾರ ಬೆಳಗ್ಗೆ 6 ರಿಂದಲೇ ಅರಣ್ಯ ಇಲಾಖೆ ಸಿಬ್ಬಂದಿ ಜಂಬೂಸವಾರಿಗೆ ಬೇಕಾದ ಸಿದ್ಧತಾ ಕಾರ್ಯಗಳನ್ನು ಕೈಗೊಳ್ಳಲು ಪ್ರಾರಂಭಿ ಸಿದರು. ಆನೆಗಳಿಗೆ ಬಣ್ಣ ಬಳಿದು ಶೃಂಗರಿಸುವುದು, ನಮ್ದಾ ಮತ್ತು ಗಾದಿಯನ್ನು ಕಟ್ಟುವುದು, ಅಂಬಾರಿ ಆನೆ ಅಭಿಮನ್ಯುವಿಗೆ ಅಂಬಾರಿ ಕಟ್ಟುವುದು ಸೇರಿದಂತೆ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸಿದರು.

ಜಂಬೂಸವಾರಿ ಸಾಗುವ ಹಾದಿಯಲ್ಲಿ ಅರಣ್ಯ ಇಲಾಖೆಯಿಂದ ನಾಲ್ಕು ವೈದ್ಯರ ತಂಡ ನಿಯೋಜಿಸಲಾಗಿತ್ತು. ಒಂದು ತಂಡ ಆನೆಗಳ ಜತೆ ಮೆರವಣಿಗೆಯಲ್ಲಿ ಸಾಗಿದರೆ ಕೆ.ಆರ್. ವೃತ್ತ, ಹೈವೆ ವೃತ್ತ ಮತ್ತು ಆರ್‌ಎಂಸಿ ವೃತ್ತಗಳಲ್ಲಿ ತಲಾ ಒಂದೊಂದು ವೈದ್ಯರ ತಂಡವನ್ನು ನಿಯೋಜಿಸಲಾಗಿತ್ತು. ಪ್ರತಿ ಆನೆಯೊಂದಿಗೆ ಮಾವುತ, ಕಾವಾಡಿ ಸೇರಿದಂತೆ ಏಳು ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಮೆರವಣಿಗೆ ವೇಳೆ ಆನೆಗ ಳಿಗೆ ಆಯಾಸವಾಗದಂತೆ ನಿಗಾವಹಿಸಲು ಹಸಿಹಲ್ಲು, ಬೆಲ್ಲ, ಗುಲ್ಕೋಸ್, ಕಬ್ಬು, ಹಿಂಡಿ ಸೇರಿಸಿ ವಿಶೇಷ ಆಹಾರವನ್ನು ಸಿದ್ದ ಪಡಿಸಿ ಅಂಬಾರಿ ಸಾಗುವ ಪ್ರಮುಖ ವೃತ್ತಗಳಲ್ಲಿ ಇಡಲಾಗಿತ್ತು. ಆ ಮೂಲಕ ಆನೆಗಳಿಗೆ ಯಾವುದೇ ರೀತಿಯಲ್ಲೂ ಕೊರತೆಯಾಗದಂತೆ ಅರಣ್ಯ ಇಲಾಖೆ ಸಿಬ್ಬಂದಿ ಎಚ್ಚರ ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net