ಸನಾತನ ಧರ್ಮದ ಏಳಿಗೆಗೆ ಶ್ರಮ

aradha
Published on

ಹೆಬ್ರಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಪಾದರು ವಿಶಿಷ್ಟ ವ್ಯಕ್ತಿತ್ವ ಹೊಂದಿದವರು. ಎಲ್ಲರನ್ನೂ ಸಮಾನವಾಗಿ ಪ್ರೀತಿಸುವ ಗುಣ ಅವರಲ್ಲಿತ್ತು. ಭಗವಂತನು ತನ್ನ ಶಕ್ತಿಯನ್ನು ಭಕ್ತರಿಗೆ ನೀಡುವಂತೆ ರಾಮದೇವರ ಗುಣ ರಾಮದೇವರ ಉಪಾಸಕರಾದ ಶ್ರೀಗಳಲ್ಲಿ ಇತ್ತು. ಅವರು ನಡೆದಾಡುವ ಗ್ರಂಥಾಲಯವಿದ್ದಂತೆ. ಅವರಲ್ಲಿರುವ ಅದ್ಭುತ ಜ್ಞಾನಶಕ್ತಿ, ಶಾಸ್ತ್ರ ಪ್ರೌಢಿಮೆ ಎಲ್ಲರನ್ನೂ ಬೆರಗುಗೊಳಿಸುವಂತಿತ್ತು ಎಂದು ಉಡುಪಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.

ಹೆಬ್ರಿ ಗಿಲ್ಲಾಳಿ ಶ್ರೀ ವಿಶ್ವೇಶಕೃಷ್ಣ ಗೋಶಾಲೆಯಲ್ಲಿ ಪೇಜಾವರ ಶ್ರೀಗಳ ಪಂಚಮ ಆರಾಧನಾ ಮಹೋತ್ಸವದಲ್ಲಿ ಮಂತ್ರಾಕ್ಷತೆ ನೀಡಿ, ಮಾತನಾಡಿದರು.

ಪ್ರತಿನಿತ್ಯ ಅನೇಕ ಪತ್ರಿಕೆ ಓದುತ್ತಿದ್ದರು. ಹಿಂದು ಧರ್ಮಕ್ಕೆ ಕಳಂಕ ಸೃಷ್ಟಿಸುವ ವಿಚಾರ ಬಂದರೆ ಕೂಡಲೇ ಪ್ರತ್ಯುತ್ತರ ನೀಡಿ ಸಮಾಜದಲ್ಲಿ ಐಕ್ಯತೆ ಬಯಸಿದ್ದರು. ಸನಾತನ ಧರ್ಮದ ಏಳಿಗೆಗೆ ಸದಾ ದುಡಿಯುತ್ತಿದ್ದ ಅಪರೂಪದ ಮಹಾನ್ ಚೇತನ ಎಂದರು.

ಜಪ, ಪಾರಾಯಣ, ಪವಮಾನ ಹೋಮ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಊರ, ಪರವೂರ ಅನೇಕ ದಾನಿಗಳ, ಶ್ರೀಪಾದರ ಶಿಷ್ಯರ ಸಹಕಾರದಿಂದ ಆರಾಧನಾ ಮಹೋತ್ಸವ ಸಂಪನ್ನಗೊಂಡಿತು.

ಉಡುಪಿ ಸಂಸ್ಕೃತ ಕಾಲೇಜು ಅಲಂಕಾರ ಶಾಸ್ತ್ರ ಪ್ರಾಧ್ಯಾಪಕ ಡಾ.ಅಮೃತೇಶ ಆಚಾರ್ಯ, ವಿದ್ವಾನ್ ಎಂ.ರಾಘವೇಂದ್ರ ಅಡಿಗ, ಗೋಶಾಲೆ ಟ್ರಸ್ಟಿಗಳಾದ ಎಂ.ರವಿ ರಾವ್, ವಿಷ್ಣುಮೂರ್ತಿ ನಾಯಕ್, ವಿಷ್ಣುಮೂರ್ತಿ ಆಚಾರ್ಯ, ಶ್ರೀಕಾಂತ್ ಭಟ್ ಅಜೆಕಾರು, ಭಕ್ತ ವೃಂದದವರು ಉಪಸ್ಥಿತರಿದ್ದರು. ಟ್ರಸ್ಟಿ ವಿದ್ವಾನ್ ಪದ್ಮನಾಭ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net