

ಮದ್ದೂರು: ರಾಜ್ಯದ ಕೋಳಿ ಸಾಕಣೆದಾರರ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಕರ್ನಾಟಕ ಸಹಕಾರ ಕುಕ್ಕುಟ ಮಹಾ ಮಂಡಳಿ ನೂತನ ಅಧ್ಯಕ್ಷ ಚಂದ್ರಶೇಖರ್ (ಮೂಡ್ಯ ಚಂದ್ರು) ಭರವಸೆ ನೀಡಿದರು.
ನೂತನ ಅಧ್ಯಕ್ಷರಾಗಿ ಬೆಂಗಳೂರಿನಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋಳಿ ಸಾಕಣೆದಾರರು ಸಾಕಷ್ಟು ಸಂಖ್ಯೆಯಲ್ಲಿದ್ದು, ಇವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸವಲತ್ತುಗಳನ್ನು ಸಮರ್ಪಕವಾಗಿ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಕೋಳಿ ಸಾಕಣೆದಾರರಿಗೆ ಹಲವಾರು ರೀತಿಯಲ್ಲಿ ಕಾನೂನಿನ ತೊಡಕುಗಳಿದ್ದು, ತುಂಬಾ ಸಮಸ್ಯೆಯಾಗುತ್ತಿದೆ. ಕಾನೂನಿನ ವ್ಯಾಪ್ತಿಯಲ್ಲಿ ಹೋರಾಟ ನಡೆಸಿ ಕೋಳಿ ಸಾಕಣೆದಾರರಿಗೆ ನ್ಯಾಯ ದೊರಕಿಸಿಕೊಟ್ಟು ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯ ವ್ಯಾಪ್ತಿ ಪ್ರವಾಸಗೊಂಡು ಸಭೆ, ಸಮಾರಂಭ ಆಯೋಜಿಸಿ ಕೋಳಿ ಸಾಕಣೆದಾರರ ಕುಂದುಕೊರತೆ ಆಲಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಸರಿಪಡಿಸಲು ಹೋರಾಟ ಮಾಡಲಾಗುವುದು ಎಂದರು.
ಕರ್ನಾಟಕ ಸಹಕಾರ ಕುಕ್ಕುಟ ಮಹಾ ಮಂಡಳಿಯ ನೂತನ ಉಪಾಧ್ಯಕ್ಷ ತ್ರಿನಾಥ್ ರೆಡ್ಡಿ, ನಿರ್ದೇಶಕರಾದ ದೇವರಾಜು ಮಲ್ಲಾಪುರ, ಕೇಶವರೆಡ್ಡಿ, ಎಸ್.ಸಿದ್ದೇಗೌಡ ಕೆ.ಆರ್.ನಗರ ಇತರರು ಇದ್ದರು.