

ಗೋಕರ್ಣ: ಜಿಪಂ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಡಾ. ದಿಲೀಶ್ ಶಶಿ ಮಂಗಳವಾರ ಗ್ರಾಮಕ್ಕೆ ಆಗಮಿಸಿ ಪಂಚಾಯಿತಿಯ ವಿವಿಧ ಪ್ರಮುಖ ಸ್ಥಳಗಳನ್ನು ವೀಕ್ಷಿಸಿ, ಮಂಜೂರಾದ ಯೋಜನಾ ನಕ್ಷೆಗಳನ್ನು ಪರಿಶೀಲಿಸಿದರು.
ನಂತರ ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆಸಿ ಸ್ಥಳೀಯ ಅಗತ್ಯಗಳು ಮತ್ತು ಸಮಸ್ಯೆಗಳ ಕುರಿತು ಸದಸ್ಯರಿಂದ ಮಾಹಿತಿ ಪಡೆದರು.
ಈ ವೇಳೆ ಮಾತನಾಡಿದ ಡಾ.ದಿಲೀಶ್ಶಶಿ, ಪವಿತ್ರ ಯತ್ರಾ ಸ್ಥಳವಾಗಿ ಮತ್ತು ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿ ಹೆಸರು ಗಳಿಸಿರುವ ಗೋಕರ್ಣದ ವಿವಿಧ ಪ್ರಮುಖ ಸ್ಥಳಗಳನ್ನು ವೀಕ್ಷಿಸಿ ಬಂದಿದ್ದೇನೆ. ಅಂದಾಜು 8 ಕಿಮೀ ವ್ಯಾಪ್ತಿ ಹೊಂದಿ ಐದು ಬೀಚ್ ಪಡೆದಿರುವ ಇಲ್ಲಿನ ಸ್ವಚ್ಛತೆ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿ ಕುರಿತು ಹೆಚ್ಚಿನ ಕಾಳಜಿ ಮತ್ತು ಪ್ರಯತ್ನಗಳ ಅವಶ್ಯಕತೆಯಿದೆ. ಸ್ವಚ್ಛತೆ ನಿರ್ವಹಣೆಗೆ ಇನ್ನೂ ಅಧಿಕ ಗ್ರಾಮ ಕಾರ್ವಿುಕರ ಅಗತ್ಯವಿದೆ.ಸದ್ಯದ ಗ್ರಾಪಂ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶವಿಲ್ಲದ ಕಾರಣ ಸರ್ಕಾರದಿಂದ ವಿಶೇಷ ಅನುದಾನಕ್ಕೆ ಪ್ರಸ್ತಾಪನೆ ಸಲ್ಲಿಸಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲು ಮತ್ತು ಕಸ ಸಾಗಾಟಕ್ಕೆ ಎರಡು ಹೆಚ್ಚಿನ ವಾಹನಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದರು.
ಪರಿಸರ ನೈರ್ಮಲ್ಯದ ದೃಷ್ಟಿಯಿಂದ ಅತ್ಯಂತ ಕಲ್ಮಶದಿಂದ ತುಂಬಿರುವ ಮುಖ್ಯ ಮಂದಿರಗಳ ಎದುರಿನ ಸಂಗಮ ನಾಲೆ ಸಂಪೂರ್ಣ ಅಭಿವೃದ್ಧಿಗೆ ಈಗಾಗಲೇ ವಿಶ್ವ ಬ್ಯಾಂಕ್ ಅನುದಾನ ಲಭಿಸಿದ್ದು, ಆದಷ್ಟು ಬೇಗ ಕಾಮಗಾರಿ ಪ್ರಾರಂಭಿಸಲಾಗುವುದು. ಸಂಪೂರ್ಣ ಯಾಂತ್ರಿಕೃತ ಒಣಕಸ ಸಂಸ್ಕರಣಾ ಘಟಕ ನಿರ್ವಣಕ್ಕೆ ಸರ್ಕಾರದಿಂದ ಅನುದಾನ ಮಂಜೂರಾಗಿ ಕಾಮಗಾರಿ ಟೆಂಡರ್ ಹಂತದಲ್ಲಿದೆ. ಈಗಾಗಲೇ ನಿರ್ವಣವಾಗಿರುವ ನೂತನ ಮಲ ಸಂಸ್ಕರಣಾ ಘಟಕ ಕಾರ್ಯಾರಂಭಕ್ಕೆ ಟ್ಯಾಂಕರ್ ಮತ್ತು ಕಾಂಪೌಂಡ್ ನಿರ್ಮಾಣ ಕೈಗೊಳ್ಳಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ವಿವರಿಸಿದರು.
ಸಭೆಯಲ್ಲಿ ಪಿಡಿಒ ವೆಂಕಟ್ರಮಣ ಪಟಗಾರ, ಕಾರ್ಯದರ್ಶಿ ಮಂಜುನಾಥ ಕೆ., ವಿನಾಯಕ ಸಿದ್ದಾಪುರ ಅಗತ್ಯ ಮಾಹಿತಿ ನೀಡಿದರು. ಅಧ್ಯಕ್ಷೆ ಸುಮನಾ ಗೌಡ, ತಾಪಂ ಇಒ ಉದಯ ನಾಯ್ಕ, ಜಿಪಂ ನೈರ್ಮಲ್ಯ ನಿರ್ವಹಣಾಧಿಕಾರಿ ಸೂರ್ಯನಾರಾಯಣ ಭಟ್ಟ ಮತ್ತು ಗ್ರಾಪಂ ಸದಸ್ಯರಿದ್ದರು.