

ನರೇಗಲ್ಲ: ಕನಸು ದೊಡ್ಡದಾಗಿದ್ದು, ಅದಕ್ಕೆ ತಕ್ಕ ಪರಿಶ್ರಮಪಟ್ಟರೆ ಜೀವನದಲ್ಲಿ ದೊಡ್ಡ ವ್ಯಕ್ತಿಯಾಗಲು ಸಾಧ್ಯ ಎಂದು ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀಅನ್ನದಾನೇಶ್ವರ ಮಹಾವಿದ್ಯಾಲಯ, ಸ್ನಾತಕೋತ್ತರ ಕೇಂದ್ರ ಹಾಗೂ ಧಾರವಾಡದ ರಾಜರತ್ನ ಕರಿಯರ್ ಅಕಾಡೆಮಿಗಳ ಆಶ್ರಯದಲ್ಲಿ ಇತ್ತೀಚೆಗೆ ಪ್ರಾರಂಭವಾದ ವಿಶೇಷ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ವಿದ್ಯಾರ್ಥಿ ದೆಸೆಯಿಂದಲೆ ದೊಡ್ಡ ದೊಡ್ಡ ಕನಸುಗಳನ್ನು ಕಟ್ಟಿಕೊಳ್ಳಲು ಸಹಾಯಕವಾಗುವ ತರಬೇತಿ ನೀಡಬೇಕೆಂಬುದು ಲಿಂ. ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳ ಕನಸಾಗಿತ್ತು. ಆಗಲೆ ಇದಕ್ಕೆ ರೂಪುರೇಷಗಳು ಅಂತಿಮಗೊಂಡಿದ್ದವು. ಆದರೆ, ಕರೊನಾ ಮಹಾಮಾರಿ ನಮ್ಮೆಲ್ಲ ಯೋಜನೆಗಳನ್ನು ಹಾಳು ಮಾಡಿತು. ಪೂಜ್ಯ ಅಜ್ಜನವರ ಆಶೀರ್ವಾದದಿಂದ ಇಂದು ಈ ಕಾರ್ಯ ಈಡೇರಿದೆ ಎಂದರು.
ಪಿಎಸ್‌ಐ ಪರೀಕ್ಷೆಯಲ್ಲಿ 17ನೇ ರ‌್ಯಾಂಕ್ ಪಡೆದಿರುವ ಕಾಲೇಜಿನ ಹಳೆಯ ವಿದ್ಯಾರ್ಥಿನಿ ಅಶ್ವಿನಿ ಹೂಗಾರ, ಹೇಮಂತ ಕರ್ಜಗಿ ಮಾತನಾಡಿದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ ವೀರಾಪೂರ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿಯ ಸದಸ್ಯ ಬಿ.ಎಫ್. ಚೇಗರೆಡ್ಡಿ, ಸೋಮಣ್ಣ ಹರ್ಲಾಪೂರ ಉಪಸ್ಥಿತರಿದ್ದರು. ಪ್ರಾಚಾರ್ಯ ಎಸ್.ಜಿ. ಕೇಶಣ್ಣವರ ಸ್ವಾಗತಿಸಿದರು. ಉಪನ್ಯಾಸಕ ಕಲ್ಲಯ್ಯ ಹಿರೇಮಠ ನಿರೂಪಿಸಿದರು. ಉಪನ್ಯಾಸಕ ಎಂ. ಆರ್. ಶಿವರಾಮ ವಂದಿಸಿದರು.