ವಕೀಲ ವೃತ್ತಿಯಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಲು ಪರಿಶ್ರಮ ಅಗತ್ಯ

1
Published on

ವಕೀಲ ವೃತ್ತಿಯಲ್ಲಿ ಬುದ್ಧಿವಂತಿಕೆ ಜತೆಗೆ ನಿರಂತರ ಪರಿಶ್ರಮ ಹಾಕಿದರೆ ಉನ್ನತ ಮಟ್ಟಕ್ಕೆ ಬೆಳೆಯಬಹುದು ಎಂದು ನ್ಯಾಯಾಧೀಶ ಬಿ.ಜಿ.ದಿನೇಶ್ ಹೇಳಿದರು.

ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಪಠ್ಯೇತರ ಚಟುವಟಿಕೆಗಳ ಮೌಲ್ಯಾಧಾರಿತ ಕಾರ್ಯಕ್ರಮ ಮತ್ತು ಕಾನೂನು ಸಾಕ್ಷರತಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ನ್ಯಾಯಾಧೀಶರಾಗಲಿ, ವಕೀಲರಾಗಲಿ ನಿತ್ಯ 2-3 ಗಂಟೆ ಓದಲೇಬೇಕು. ನ್ಯಾಯಾಲಯಕ್ಕೆ ಬಂದು ಅಭ್ಯಾಸ ಮಾಡಿದರೆ ಎಲ್ಲ ವಿಷಯಗಳ ಬಗ್ಗೆ ತಿಳಿದುಕೊಳ್ಳಬಹುದು. ದೊಡ್ಡ ವಕೀಲರೆಲ್ಲರೂ ಕಠಿಣ ಪರಿಶ್ರಮದಿಂದ ಆ ಮಟ್ಟಕ್ಕೆ ಬಂದು ಹೆಸರು ಸಂಪಾದಿಸಿದ್ದಾರೆ. ಆದ್ದರಿಂದ ಈ ವೃತ್ತಿಯಲ್ಲಿ ನಿರಂತರ ಕಠಿಣ ಶ್ರಮ ಅಗತ್ಯ ಎಂದರು.

ವಕೀಲ ವೃತ್ತಿಗೆ ಪ್ರವೇಶ ಪಡೆದಾಗ ಹೊಸ ಅನುಭವವಾಗುತ್ತದೆ. ಕಾನೂನು ಪದವಿ ಮುಗಿಸಿ ಬರುವ ನಮಗೆ ಮೊದಲ ದಿನ ಕೋರ್ಟ್‌ನಲ್ಲಿ ಏನಾಗುತ್ತಿದೆ ಎನ್ನುವುದು ಅರ್ಥವಾಗುತ್ತದೆ. ಏಕೆಂದರೆ, ನಾವು ಕಾಲೇಜಿನಲ್ಲಿ ಬೇರೆಯೇ ತಿಳಿದುಕೊಂಡಿರುತ್ತೇವೆ. ಆದರೆ, ನ್ಯಾಯಾಲಯಕ್ಕೆ ಬಂದು ಕಲಾಪ ವೀಕ್ಷಣೆ ಮಾಡಿದಾ ಆಗುವ ಅನುಭವವೇ ಬೇರೆ. ಆದ್ದರಿಂದ ಆರಂಭದಲ್ಲಿ ಪರಿಶ್ರಮ ಮುಖ್ಯವಾಗುತ್ತದೆ. ಬಳಿಕ ಅನುಭವದ ಮೇಲೆಯೇ ಸಾಗುತ್ತದೆ ಎಂದರು.
ವಿದ್ಯಾರ್ಥಿಗಳು ಆರಂಭಿಕ ದಿನಗಳಲ್ಲಿ ಕಷ್ಟಪಡಬೇಕು. ಸಂವಿಧಾನ, ಕಾನೂನು ಅಭ್ಯಾಸ ಮಾಡಬೇಕು. ಸ್ವತಂತ್ರವಾಗಿರುವ ವ್ಯವಸ್ಥೆ ಉಳಿಸಬೇಕು. ಅದಕ್ಕೆ ಚ್ಯುತಿ ತರದಂತೆ ಕೆಲಸ ಮಾಡಬೇಕು. ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಕಾನೂನು ಪದವಿ ಪಡೆದ ಪ್ರಥಮ ತೃತೀಯ ಲಿಂಗಿ ಶಶಿಕುಮಾರ್ ಹಾಗೂ 2021-22ನೇ ಸಾಲಿನ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಿಂದ ರ‌್ಯಾಂಕ್ ಪಡೆದ ಕಾಲೇಜಿನ ಸೇವಂತಿ, ದೀಪಿಕಾ, ನಿತೀಶ್ ಮತ್ತು ರಾಕೇಶ್ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿವಿಧ ದತ್ತಿಯಡಿ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಲಾಯಿತು.

ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಬೆಂಗಳೂರಿನ ಯುಕೋ ಬ್ಯಾಂಕ್‌ನ ಹಿರಿಯ ನಿವೃತ್ತ ವ್ಯವಸ್ಥಾಪಕ ವೆಂಕಟೇಶ್ ಪ್ರಸಾದ್, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಚಿ ಶ್ರೀಶೈಲಾ ರಾಮಣ್ಣನವರ್, ಪ್ರಾಂಶುಪಾಲ ಡಾ.ಪಿ.ದೀಪು, ಕಾನೂನು ಅಧ್ಯಯನಗಳ ವಿಭಾಗದ ನಿರ್ದೇಶಕ ಪ್ರೊ.ಕೆ.ಬಿ.ವಾಸುದೇವ, ಸಂಚಾಲಕ ಡಾ.ಎನ್.ಜೆ.ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net