ವೃತ್ತಿಯಲ್ಲಿ ಇರಲಿ ಕಾರ್ಯದಕ್ಷತೆ

hsd shankustapane 09 p1
Published on

ಹೊಸದುರ್ಗ: ಸರ್ಕಾರಿ ನೌಕರರು ಬದ್ಧತೆಯಿಂದ ಕಾರ್ಯನಿರ್ವಹಿಸಿದರೆ ಮಾತ್ರ ಸರ್ಕಾರಿ ಯೋಜನೆಗಳ ಅನುಷ್ಠಾನ ಯಶಸ್ವಿಯಾಗಲು ಸಾಧ್ಯ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.

ಸರ್ಕಾರಿ ನೌಕರರ ಸಂಘ ಸುವರ್ಣ ಮಹೋತ್ಸವದ ಆಂಗವಾಗಿ ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಸಭಾಭವನದ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಜನಪರ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಪ್ರಾಮಾಣಿಕತೆ ಪ್ರದರ್ಶಿಸಬೇಕು. ಆದರೆ, ಕೆಲವು ಕಚೇರಿಗಳಲ್ಲಿ ನೌಕರರ ಕಾರ್ಯನಿರ್ವಹಣೆಯಲ್ಲಿ ಲೋಪ-ದೋಷಗಳಿವೆ. ಜನರನ್ನು ಅಲೆದಾಡಿಸದೆ ಅವರ ಕೆಲಸ ಮಾಡಿಕೊಡಲು ಮುಂದಾಗಬೇಕು ಎಂದರು.

ಶಿಕ್ಷಕರು ಮಕ್ಕಳಿಗೆ ಮೌಲ್ಯಯುತವಾದ ಶಿಕ್ಷಣ ಕೊಡುವ ಜತೆಗೆ ಸಂಸ್ಕಾರವನ್ನು ಬೆಳೆಸಬೇಕು. ಇತ್ತಿಚೆಗೆ ಪಟ್ಟಣದಲ್ಲಿರುವ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಗಲಾಟೆ ಹೆಚ್ಚಾಗಿ ವಾರ್ಡನ್‌ಗಳಿಂದ ಹತೋಟಿ ಮಾಡಲು ಸಾಧ್ಯವಾಗುತ್ತಿಲ್ಲ. ಅನಿವಾರ್ಯವಾಗಿ ಪೊಲೀಸರನ್ನು ಕಳುಹಿಸಿ ಪರಿಸ್ಥಿತಿ ತಿಳಿಗೊಳಿಸಲಾಯಿತು. ಇಂತಹ ಘಟನೆ ನಡೆಯದಂತೆ ನೌಕರರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಸರ್ಕಾರಿ ನೌಕರರೊಂದಿಗೆ ಶಾಸಕ ಬಿ.ಜಿ.ಗೋವಿಂದಪ್ಪ ಉತ್ತಮ ಸಂಬಂಧ ಹೊಂದಿದ್ದಾರೆ. ಕಾರ್ಯಾಂಗದ ಆಡಳಿತಕ್ಕೆ ಅಗತ್ಯ ಸಹಕಾರ ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘದ ತಾಲೂಕಾಧ್ಯಕ್ಷ ಆರ್.ಲಕ್ಷ್ಮಯ್ಯ ಮಾತನಾಡಿ, 1972ರಲ್ಲಿ 50 ಜನರೊಂದಿಗೆ ಅರಂಭವಾದ ಸರ್ಕಾರಿ ನೌಕರರ ಸಂಘ ಸದೃಢವಾಗಿ ಬೆಳೆದಿದೆ. ಸರ್ಕಾರಿ ನೌಕರರು ಸೇರಿ ಸಾರ್ವಜನಿಕವಾಗಿ ನಡೆಯುವ ಕಾರ್ಯಗಳಿಗೆ ಆರ್ಥಿಕ ನೆರವು ಒದಗಿಸುವ ಮೂಲಕ ಸಾಮಾಜಿಕ ಬದ್ಧತೆ ತೋರುತ್ತಿದೆ. ಎಲ್ಲರ ಸಹಕಾರದಿಂದ ಮಾತ್ರ ಯಾವುದೇ ಸಂಘಟನೆ ಬಲವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಂಘದ ರಾಜ್ಯ ಕಾರ್ಯದರ್ಶಿ ಎಂ.ಆರ್.ಶಾಂತಪ್ಪ, ಉಪಾದ್ಯಕ್ಷ ಮೋಹನ್ ಕುಮಾರ್, ಜಿಲ್ಲಾಧ್ಯಕ್ಷ ತಿಮ್ಮಾರೆಡ್ಡಿ, ಬಿಇಒ ಸೈಯದ್ ಮೋಸಿನ್, ಬಿಸಿಎಂ ವಿಸ್ತರಣಾಧಿಕಾರಿ ಕೆ.ಸಿ.ಶಶಿಧರ್, ವಿರೇಶ್, ಎಂ.ಆರ್.ಸಿ.ಮೂರ್ತಿ, ಜಯಣ್ಣ, ಮಲ್ಲಿಕಾರ್ಜುನಪ್ಪ, ನಾರಾಯಣಪ್ಪ, ಆಶೋಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net