ಬಾಲ್ಯವಿವಾಹ ತಡೆಗಟ್ಟಲು ಪರಿಣಾಮಕಾರಿಯಾಗಿ ಕಾಯ್ದೆ ಅನುಷ್ಠಾನಗೊಳಿಸಿ

tahashildhar meeting
ಶಿವಮೊಗ್ಗದಲ್ಲಿ ತಹಸೀಲ್ದಾರ್ ಬಿ.ಎನ್.ಗಿರೀಶ್ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಡಾ. ಚಂದ್ರಶೇಖರ್, ರಮೇಶ್, ಹೇಮಂತ್‌ರಾಜ್ ಅರಸ್, ರವಿರಾಜ್ ಇದ್ದರು.
Published on

ಶಿವಮೊಗ್ಗ: ಬಾಲ್ಯ ವಿವಾಹ, ಕೌಟುಂಬಿಕ ದೌರ್ಜನ್ಯದಂತಹ ಪ್ರಕರಣಗಳನ್ನು ತಗ್ಗಿಸಲು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಶಿವಮೊಗ್ಗ ತಹಸೀಲ್ದಾರ್ ಬಿ.ಎನ್.ಗಿರೀಶ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ವಿವಿಧ ಯೋಜನೆಗಳ ಸಮನ್ವಯ ಸಮಿತಿ ಹಾಗೂ ತಾಲೂಕು ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಸಭೆ ನಡೆಸಿದ ಅವರು, ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧ ತಡೆಗೆ ಸರ್ಕಾರ ಅನೇಕ ಕಾಯ್ದೆ, ಕಾನೂನುಗಳನ್ನು ಜಾರಿಗೆ ತಂದಿದೆ. ಅಧಿಕಾರಿಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಬಾಲ್ಯವಿವಾಹ ಸೇರಿ ಮಕ್ಕಳು ಮತ್ತು ಮಹಿಳೆಯರ ಸಂರಕ್ಷಣೆ ವಿಷಯದಲ್ಲಿ ಸಾರ್ವಜನಿಕರು ಸಹ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸರ್ಕಾರದ ವಿವಿಧ ವಸತಿ ಶಾಲೆಗಳು, ಸರ್ಕಾರಿ ಶಾಲೆಗಳ ಮುಖ್ಯಶಿಕ್ಷಕರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ವಿಶೇಷ ಸಭೆ ಕರೆದು ಬಾಲ್ಯ ವಿವಾಹ ತಡೆ, ಡೆಂೆ ನಿಯಂತ್ರಣ ಸೇರಿ ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ಮಾಹಿತಿ ನೀಡಬೇಕು. ಬಾಲ್ಯ ವಿವಾಹ ತಡೆಯುವುದು ಎಲ್ಲ ಅಧಿಕಾರಿ, ಸಿಬ್ಬಂದಿ ಕರ್ತವ್ಯವಾಗಿದೆ. ಶಾಲಾ ಮುಖ್ಯ ಅಧ್ಯಾಪಕರು ಹಾಗೂ ಸಾರ್ವಜನಿಕರು ಬಾಲ್ಯವಿವಾಹ ಕಂಡುಬಂದರೆ ತಡೆಯುವಲ್ಲಿ ಸಹಕರಿಸಬೇಕು ಎಂದರು.
ಶಿವಮೊಗ್ಗ ಸಿಡಿಪಿಒ ಸಿ.ಗಂಗಾಬಾಯಿ ಮಾತನಾಡಿ, ಜೂನ್ ಅಂತ್ಯದವರೆಗೆ 194 ಮಕ್ಕಳಿಗೆ ಭಾಗ್ಯಲಕ್ಷ್ಮೀ ಬಾಂಡ್ ನೀಡಲಾಗಿದೆ. ಭೇಟಿ ಬಚಾವೋ ಭೇಟಿ ಪಡಾವೋ ಕಾರ್ಯಕ್ರಮದಡಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಅಧಿನಿಯಮದಡಿ ಜೂನ್‌ವರೆಗೆ 35 ಪ್ರಕರಣ ದಾಖಲಾಗಿದ್ದು, 20 ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ. ಆಪ್ತ ಸಮಾಲೋಚನೆ ಹಂತದಲ್ಲಿ ಉಳಿದ ಪ್ರಕರಣಗಳಿವೆ. ತಾಲೂಕಿನಲ್ಲಿ ಒಟ್ಟು 825 ಸ್ತ್ರೀಶಕ್ತಿ ಗುಂಪುಗಳಿದ್ದು, ಎಲ್ಲ ಗುಂಪುಗಳು ಸುತ್ತು ನಿಧಿ ಸೌಲಭ್ಯ ಪಡೆದಿವೆ ಎಂದು ಮಾಹಿತಿ ನೀಡಿದರು.
ಬಿಇಒ ರಮೇಶ್, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರ ಹೇಮಂತ್‌ರಾಜ್ ಅರಸ್, ಸಾಮಾಜಿಕ ಕಾರ್ಯಕರ್ತ ರವಿರಾಜ್, ವಕೀಲರು, ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

ಸೋಮಿನಕೊಪ್ಪದಲ್ಲಿ ಮಾದಕ ವ್ಯಸನಮುಕ್ತ ಕೇಂದ್ರ
ಮಾದಕ ವ್ಯಸನ ನಿಯಂತ್ರಣಕ್ಕಾಗಿ ನಗರದ ಸೋಮಿನಕೊಪ್ಪದಲ್ಲಿ ಮಾದಕ ವ್ಯಸನಮುಕ್ತ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ತಹಸೀಲ್ದಾರ್ ಬಿ.ಎನ್.ಗಿರೀಶ್ ಹೇಳಿದರು. ಮಾದಕ ವ್ಯಸನಮುಕ್ತ ಕೇಂದ್ರದಲ್ಲಿ 46 ಮಂದಿಗೆ ಅವಕಾಶವಿದ್ದು, ಪ್ರಸ್ತುತ ಉಚಿತವಾಗಿ 22 ಜನರ ಮದ್ಯವ್ಯಸನ ಬಿಡಿಸುವ ಕಾರ್ಯ ಮಾಡಲಾಗುತ್ತಿದೆ. ಮಾದಕ ವ್ಯಸನಕ್ಕೆ ಒಳಗಾಗಿರುವ ಮಕ್ಕಳು, ವಯಸ್ಕರನ್ನು ಅದರಿಂದ ಹೊರಗೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದರು. ತಾಲೂಕಿನಲ್ಲಿ ಈವರೆಗೆ 23 ತಂಬಾಕು ದಾಳಿಗಳು ಆಗಿದ್ದು, 458 ಪ್ರಕರಣ ದಾಖಲಿಸಿ 34,350 ರೂ. ದಂಡ ಸಂಗ್ರಹಿಸಲಾಗಿದೆ. ಟಿಸಿಸಿ ಕೇಂದ್ರಕ್ಕೆ 2,039 ಜನರು ಭೇಟಿ ನೀಡಿದ್ದು, ಶೇ.18ರಷ್ಟು ಜನರು ತಂಬಾಕು ತ್ಯಜಿಸಿದ್ದಾರೆ. ಎಲ್ಲ ಶಾಲೆಗಳ 100 ಮೀ. ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ನಿಷೇಧ ಫಲಕ ಹಾಕಬೇಕು ಎಂದು ಸೂಚಿಸಿದರು.

ಪ್ರಸಕ್ತ ಸಾಲಿನ ಜೂನ್‌ವರೆಗೆ ತಾಲೂಕಿನಲ್ಲಿ 22 ಬಾಲ್ಯ ವಿವಾಹ ಪ್ರಕರಣ ವರದಿಯಾಗಿದ್ದು, 6 ವಿವಾಹ ತಡೆಯಲಾಗಿದೆ. ಮಹಿಳೆಯರ ಮತ್ತು ಮಕ್ಕಳ ಸಾಗಾಟ ನಿರ್ಮೂಲನೆ, ಮಕ್ಕಳ ರಕ್ಷಣೆಗೆ ಎಲ್ಲ ಗ್ರಾಪಂಗಳಲ್ಲಿ ಮಕ್ಕಳ ಸರ್ವೇ ಮಾಡಿ, ಕಾವಲು ಸಮಿತಿ ಸಭೆಗಳನ್ನು ನಡೆಸಲಾಗಿದೆ.ಸಿ.ಗಂಗಾಬಾಯಿ, ಸಿಡಿಪಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net