ಬಾಲ್ಯವಿವಾಹ ತಡೆ ಪರಿಣಾಮಕಾರಿಯಾಗಲಿ

mysore
Published on

ಮೈಸೂರು: ಬಾಲ್ಯವಿವಾಹ ತಡೆಯಲು ಇರುವ ಕಾನೂನನ್ನು ಅಧಿಕಾರಿಗಳು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜೆ.ದಿನೇಶ್ ತಿಳಿಸಿದರು.


ಮಕ್ಕಳ ರಕ್ಷಣಾ ನಿರ್ದೇಶನಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮುಕ್ತಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಆಯೋಜಿಸಿದ್ದ ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳ ಕುರಿತ ತರಬೇತಿ, ಅರಿವು ಕಾರ್ಯಾಗಾರದಲ್ಲಿ ಮಾತನಾಡಿದರು.


ಬಾಲ್ಯವಿವಾಹ ತಡೆಗಟ್ಟುವ ಸಂದರ್ಭದಲ್ಲಿ ಅಧಿಕಾರಿಗಳು ಪ್ರತಿಭಟನೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ನ್ಯಾಯಾಧೀಶರಿಂದ ನಿರ್ಬಂಧನಾಜ್ಞೆ ಜಾರಿಗೊಳಿಸಬೇಕು. ಇದಕ್ಕೆ ಬಾಲ್ಯವಿವಾಹ ತಡೆ ಕಾಯ್ದೆಯಲ್ಲೇ ಅವಕಾಶವಿದೆ. ಇದು ಬಹಳಷ್ಟು ಅಧಿಕಾರಿಗಳಿಗೆ ತಿಳಿದಿಲ್ಲ. ಹೀಗಾದರೆ ಯಾವುದೇ ರೀತಿಯ ಬಿಕ್ಕಟ್ಟು, ಸಮಸ್ಯೆಗಳು ಎದುರಾದರೆ ಸುಲಭವಾಗಿ ನಿರ್ವಹಣೆ ಮಾಡಬಹುದಾಗಿದೆ ಎಂದರು.


ಮೈಸೂರು ಸೇರಿದಂತೆ ರಾಜ್ಯದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಬಾಲ್ಯ ವಿವಾಹಗಳಾಗುತ್ತಿವೆ. ಇದರಿಂದ ಅಪ್ರಾಪ್ತರು ಗರ್ಭಿಣಿಯರಾಗಿರುವ ಪ್ರಕರಣಗಳೂ ವರದಿಯಾಗುತ್ತಿವೆ. ಕಾಯ್ದೆಯನ್ನು ಸಮರ್ಪಕ ಮತ್ತು ಪರಿಣಾಮಕಾರಿಯಾಗಿ ಬಳಕೆ ಮಾಡಿದರೆ ಇದನ್ನು ಅಧಿಕಾರಿಗಳು ತಡೆಗಟ್ಟಬಹುದು ಎಂದರು.


ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಮಕ್ಕಳ ಹಕ್ಕುಗಳು, ಬಾಲ್ಯವಿವಾಹ ತಡೆ, ಮಕ್ಕಳ ಶಿಕ್ಷಣದ ಕುರಿತು ಸಾರ್ವಜನಿಕರು, ಪಾಲಕರು, ಅಧಿಕಾರಿಗಳು ಜಾಗೃತಗೊಳ್ಳಬೇಕಾಗಿದೆ ಎಂದರು.


ಅತಿ ವೇಗದ ನಗರೀಕರಣಕ್ಕೆ ಮೈಸೂರು ಒಗ್ಗಿಕೊಳ್ಳುತ್ತಿದೆ. ಆದರೆ ಇನ್ನೂ ಗ್ರಾಮೀಣ ಭಾಗಗಳಲ್ಲಿ ಹೆಣ್ಣು ಮಕ್ಕಳ ಬಾಲ್ಯ ವಿವಾಹ ನಡೆಯುತ್ತಿದೆ. ಮಕ್ಕಳ ಹಕ್ಕುಗಳು ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಮಕ್ಕಳಿಗೆ ಗುಡ್ ಟಚ್, ಬ್ಯಾಡ್ ಟಚ್‌ಗಳ ಬಗ್ಗೆ ಅರಿವು ಮೂಡಿಸಬೇಕು. ಪಾಲಕರು ಸಹ ತಮ್ಮ ಮಕ್ಕಳಿಗೆ ಗಂಡು ಮತ್ತು ಹೆಣ್ಣು ಎಂಬ ತಾರತಮ್ಯ ಮಾಡಬಾರದು ಎಂದರು.


ಪ್ರತಿಯೊಬ್ಬರಲ್ಲೂ ಮಾನವೀಯತೆ, ಸಂವೇದನಾಶೀಲತೆ ಇರಬೇಕು. ಹೆಣ್ಣು ಮಕ್ಕಳು ಸಮಸ್ಯೆಗಳನ್ನು ಹೊತ್ತು ತಂದಾಗ ಅದನ್ನು ಕಡೆಗಣಿಸಬಾರದು. ಸಮಸ್ಯೆ ಚಿಕ್ಕ್ಕದಾಗಿದ್ದಾಗಲೇ ಅದನ್ನು ಬಗೆಹರಿಸಿಕೊಳ್ಳಬೇಕು ಎಂದರು.


ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾತನಾಡಿ, ದೇಶ, ಸಮಾಜವನ್ನು ಸದೃಢವಾಗಲು ಮಕ್ಕಳ ರಕ್ಷಣೆ ಮುಖ್ಯ. ಇದರಿಂದ ಉತ್ತಮ ಭವಿಷ್ಯ ನಿರ್ಮಿಸಲು ಸಾಧ್ಯ. ಆದ್ದರಿಂದ ಮಕ್ಕಳ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು ಎಂದರು. ಛಾಯಾದೇವಿ ಶಾಲಾ ಮಕ್ಕಳಿಂದ ಬಾಲ್ಯ ವಿವಾಹದ ನಿಷೇಧ ಕುರಿತಂತೆ ಕಿರು ನಾಟಕವನ್ನು ಪ್ರದರ್ಶಿಸಿದರು


ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಎಸ್.ಮಂಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಚ್.ಆರ್. ಸುರೇಶ್, ಜಿಲ್ಲಾ ಮಕ್ಕಳಾ ರಕ್ಷಣಾ ಘಟಕದ ರಕ್ಷಣಾಧಿಕಾರಿ ಎನ್.ಟಿ.ಯೋಗೇಶ್, ಮುಕ್ತ ವಿವಿ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಸಿ.ಅನಿತಾ, ಪೋಲಿಸ್ ಮಹಾ ನಿರ್ದೇಶಕರ ತರಬೇತಿ ಕಚೇರಿಯ ತರಬೇತುದಾರ ಸಿ.ಜೆ.ರೋಹಿತ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net