

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಅಂಗವೈಕಲ್ಯ ಹೊಂದಿರುವ 287 ಮಕ್ಕಳು ಮನೆಯಾಧಾರಿತ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಯಾವುದೇ ಮಗು ಶಾಲಾ ಕಲಿಕೆಯಿಂದ ದೂರ ಉಳಿಯಬಾರದು. ಎಲ್ಲ ಮಕ್ಕಳಿಗೂ ಶಿಕ್ಷಣ ಸಿಗಬೇಕೆಂಬ ಪರಿಕಲ್ಪನೆಯಲ್ಲಿ ಸರ್ಕಾರವು ಉಚಿತ ದಾಖಲಾತಿ, ನಾನಾ ಸೌಕರ್ಯಗಳನ್ನು ಒದಗಿಸುತ್ತಿದೆ. ಸಾಮಾನ್ಯ ಮಕ್ಕಳು, ಭಾಗಶ@ ಅಂಗವಿಕಲ ಮಕ್ಕಳು ಶಾಲೆಗಳಿಗೆ ಹಾಜರಾಗುತ್ತಿದ್ದಾರೆ. ಇದರ ನಡುವೆ ನಡೆಯಲು ಸಾಧ್ಯವಾಗದೇ ಉಳಿದಿರುವವರಿಗೆ ವಿಶೇಷ ತರಬೇತಿಯ ಮಾರ್ಗದರ್ಶನ ನೀಡಲು ವಿಶೇಷ ಶಿಕ್ಷಕರ ಮೂಲಕ ಕಲಿಕೆಯನ್ನು ನೀಡಲಾಗುತ್ತಿದೆ. ಅಂಗವೈಕಲ್ಯ ಮೆಟ್ಟಿ ಜೀವನ ಅನ್ವಯದ ಕಲಿಕಾ ಚಟುವಟಿಕೆಯ ಮೂಲಕ ದೌರ್ಬಲ್ಯವನ್ನು ನಿವಾರಿಸುವಂತಹುದು, ದೈಹಿಕ ಮತ್ತು ಮನೋಬಲ ಉತ್ತೇಜನಕಾರಿಯು ಕೆಲಸವು ದೊಡ್ಡ ಸವಾಲು. ಇದಕ್ಕೆ ಪಾಲಕರ ಸಹಕಾರದೊಂದಿಗೆ ಮನೆಯಲ್ಲಿಯೇ ಓದು ಬರಹ, ಸರಾಗ ಅಭ್ಯಾಸ ಸೇರಿದಂತೆ ವಿವಿಧ ಚಟುವಟಿಕೆ ಕೈಗೊಳ್ಳಲಾಗುತ್ತಿದೆ.
*ವಿಶೇಷ ಬೋಧನೆ
ಗೃಹಾಧಾರಿತ ಮಕ್ಕಳ ಯೋಜನೆಯಡಿ ವಿಶೇಷ ಚೇತನರಿಗೆ, ದೈಹಿಕ ವಿಕಲಾಂಗ, ಹಿಂದುಳಿದ ಹಿನ್ನೆಲೆಯಲ್ಲಿ ಮಕ್ಕಳಿಗೆ ಬೋಧಿಸಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ, ಸಾಮಾನ ಮತ್ತು ಅಂತರ್ಗತ ಶಿಕ್ಷಣ ಮಾರ್ಗಸೂಚಿ ಅನ್ವಯ ಕಲಿಕೆಯನ್ನು ನೀಡಲಾಗುತ್ತಿದೆ. ಸಂಚಾರಿ ಸಂಪನ್ಮೂಲ ಶಿಕ್ಷಕರು ತೀವ್ರ ಅಂಗವೈಕಲ್ಯ ಹೊಂದಿರುವ ವಿದ್ಯಾರ್ಥಿಗಳ ಮನೆಗೆಗಳಿಗೆ ತೆರಳಿ, ಮಗು ಕಲಿಯ ಮಟ್ಟವನ್ನು ಸಾಧಿಸುವವರೆಗೂ ಅಗತ್ಯ ಮಾರ್ಗದರ್ಶನ ನೀಡುತ್ತಾರೆ. ಇಂತಹ ಸಂದರ್ಭದಲ್ಲಿ ನಿಯಮಿತ ಶಾಲಾ ಶಿಕ್ಷಣಕ್ಕೆ ಪರಿವರ್ತಿಸುವ ಕೆಲಸವನ್ನೂ ಸಹ ಕೈಗೊಳ್ಳಲಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ಅವರ ಅಸಮರ್ಥತೆಯನ್ನು ಲೆಕ್ಕಿಸದೇ ಸಮಾನ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವ ಬದ್ಧತೆಯನ್ನು ತೋರಿಸುತ್ತದೆ. ಹಾಗೆಯೇ ಬಲವಾದ ಬಾಲ್ಯ ಶೈಕ್ಷಣಿಕ ವ್ಯವಸ್ಥೆಯನ್ನು ರಚಿಸುವ ಗುರಿಯನ್ನು ಸಾಧಿಸುತ್ತದೆ.
*ದೈಹಿಕ ನ್ಯೂನತೆಗಳು
ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾಕ್ಷರತಾ ಮತ್ತು ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಜತೆಗೆ ಸರ್ಕಾರವು ಮಕ್ಕಳ ಸರ್ವೇ ಕಾರ್ಯವನ್ನು ಕೈಗೊಳ್ಳುತ್ತಿದ್ದು ಶೈಕ್ಷಣಿಕ, ಆರೋಗ್ಯ ಸುಧಾರಣಾ ಕ್ರಮಗಳನ್ನು ಜಾರಿಗೆ ತರುತ್ತಿದೆ. ಅದರಂತೆ ಜಿಲ್ಲೆಯಲ್ಲಿ 2027 ಶಾಲೆಗಳಲ್ಲಿ ಕಿವುಡುತನ, ಕುರುಡುತನ, ಭಾಗಶ@ ಕುರುಡುತನ, ನರ ದೌರ್ಬಲ್ಯ ಸೇರಿದಂತೆ ದೈಹಿಕ ನಾನಾ ನ್ಯೂನತೆಯುಳ್ಳ 1449 ಮಕ್ಕಳ ನೋಂದಣಿಯಾಗಿದ್ದು ಇದರಲ್ಲಿ 834 ಬಾಲಕರು ಮತ್ತು 615 ಬಾಲಕಿಯರು ಸೇರಿದ್ದಾರೆ. ಇವರಿಗೆ ಅಗತ್ಯ ಕಲಿಕೋಪಕರಣಗಳು, ನೆರವಿನ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ.
*ವಿಶೇಷ ಶಿಕ್ಷಕರ ಹುದ್ದೆ
ಕಲಿಕೆಯಲ್ಲಿ ವಿಶೇಷ ಸಾಮರ್ಥ್ಯದ ಮಕ್ಕಳಿಗೆ (ಅಂಗವಿಕಲರು) ಬೋಧಿಸಲು ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗೆ ತಲಾ 12 ಶಿಕ್ಷಕರಂತೆ 24 ವಿಶೇಷ ಶಿಕ್ಷಕರ ಹುದ್ದೆಗೆ ಸರ್ಕಾರವು ಮಂಜೂರಾತಿ ನೀಡಿದ್ದು ಈ ಪೈಕಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ತಲಾ 10 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದಂತೆ 14 ವಿಶೇಷ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಗೃಹಾಧಾರಿತ ಶಾಲಾ ಶಿಕ್ಷಣವನ್ನು ಬೆಂಬಲಿಸಲು ವಿಶೇಷ ಶಿಕ್ಷಕರನ್ನು ನಿಯೋಜಿಸುತ್ತಿದ್ದು ಕಾಲ ಕಾಲಕ್ಕೆ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ನೆರವಾಗುವುದಕ್ಕೆ ಪೂರಕವಾಗಿ ತರಬೇತಿಯನ್ನೂ ಸಹ ನೀಡಲಾಗುತ್ತದೆ.