ಸಕ್ಕರೆನಾಡಿಗೆ ವರ್ಷದ ಮೊದಲ ಮಳೆಯ ಖುಷಿ: ಅಲಲ್ಲಿ ಅವಾಂತರ ಸೃಷ್ಟಿಸಿದ ವರುಣ...!

Rain effect Mandya
Published on

ಮಂಡ್ಯ: ಬಿಸಿಲ ಬೇಗೆಯಿಂದ ತತ್ತರಿಸಿದ ಜಿಲ್ಲೆಗೆ ಗುರುವಾರ ಬಹುದಿನಗಳ ಬಳಿಕ ಮಳೆಯ ದರ್ಶನವಾಯಿತು.
ಬೆಳಗ್ಗೆಯಿಂದಲೂ ಬಿಸಿಲ ತಾಪಮಾನ ಹೆಚ್ಚಾಗಿತ್ತು. ಸಂಜೆ ವೇಳೆಗೆ ಮೋಡ ಕವಿದ ವಾತಾವರಣದಂತಾಗಿ ಜೋರು ಮಳೆ ಸುರಿಯಿತು. ಮಂಡ್ಯ, ಮದ್ದೂರು, ನಾಗಮಂಗಲ, ಕೆ.ಆರ್.ಪೇಟೆ, ಪಾಂಡವಪುರ, ಶ್ರೀರಂಗಪಟ್ಟಣ ತಾಲೂಕಿನ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಇನ್ನು ಮಂಡ್ಯ ನಗರದಲ್ಲಿ ಇಪ್ಪತ್ತು ನಿಮಿಷಕ್ಕೂ ಹೆಚ್ಚು ಕಾಲ ಗುಡುಗು, ಬಿರುಗಾಳಿ ಸಹಿತ ಜೋರು ಮಳೆಯಾಯಿತು. ಇದರಿಂದಾಗಿ ತಂಪಿನ ವಾತಾವರಣ ಸೃಷ್ಟಿಯಾಯಿತು.

ಪರಿಣಾಮ ಮಂಡ್ಯ ನಗರವನ್ನು ಪ್ರವೇಶಿಸುವ ಕಿರಗಂದೂರು ಸಮೀಪ ಬೃಹತ್ ಸ್ವಾಗತ ಕಮಾನು ಮುರಿದು ರಸ್ತೆ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಬೆಂಗಳೂರು-ಮೈಸೂರು ಹೆದ್ದಾರಿಯಾಗಿರುವ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತು. ಈ ಹಿನ್ನೆಲೆಯಲ್ಲಿ ಜೆಸಿಬಿ ಸಹಾಯದಿಂದ ಸ್ವಾಗತ ಕಮಾನನ್ನು ರಸ್ತೆಯಿಂದ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಇನ್ನು ಅಶೋಕನಗರದಲ್ಲಿ ಬೃಹತ್ ತೆಂಗಿನ ಮರ ಮನೆ ಮೇಲೆ ಉರುಳಿಬಿದ್ದಿದೆ. ಇಲ್ಲಿಯೂ ಸಹ ಯಾವುದೇ ಅನಾಹುತವಾಗಿಲ್ಲ.

ಮಳವಳ್ಳಿ ತಾಲೂಕಿನ ಧನಗೂರು ಗ್ರಾಮದಲ್ಲಿ ಗುರುವಾರ ಸಂಜೆ ಬಿರುಗಾಳಿಗೆ ತೆಂಗಿನ ಮರ ಮುರಿದು ಬಿದ್ದು ಮನೆಯೊಂದು ಜಖಂಗೊಂಡಿದೆ.
ಗ್ರಾಮದ ಬಿ.ಸಿದ್ದಯ್ಯ ಎಂಬುವರ ಮನೆ ಮೇಲೆ ಮರ ಬಿದ್ದು ಹಾನಿಗೊಳಗಾಗಿದೆ. ಸಂಜೆ ಬಿರುಗಾಳಿಯ ರಭಸಕ್ಕೆ ಮನೆ ಮುಂದಿನ ತೆಂಗಿನ ಮರ ಬುಡ ಸಮೇತ ಉರುಳಿ ಬಿದ್ದಿದೆ. ಸಿದ್ದಯ್ಯ ಕುಟುಂಬ ವಾಸವಿದ್ದರಾದರೂ ಯಾವುದೇ ಪ್ರಾಣ ಹಾನಿಯಾಗಿಲ್ಲ. ಮನೆಯ ಛಾವಣಿ ಮುರಿದು ಹೋಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net