

ಶಿವಮೊಗ್ಗ: ಕಾಂಗ್ರೆಸ್ ನಾಯಕರು ವೈಯಕ್ತಿಕವಾಗಿ ಎಷ್ಟಾದರೂ ಬಡಿದಾಡಿಕೊಳ್ಳಲಿ. ಆದರೆ ಸ್ವಾತಂತ್ರೃದ ಅಮೃತ ಮಹೋತ್ಸವದ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ದೇಶ ಒಡೆದವರಿಂದ ನಾವು ದೇಶಭಕ್ತಿಯ ಪಾಠ ಕಲಿಯಬೇಕಿಲ್ಲ ಎನ್ನುವ ಮೂಲಕ ಶಾಸಕ ಕೆ.ಎಸ್.ಈಶ್ವರಪ್ಪ, ಹರ್ ಘರ್ ತಿರಂಗಾ ಅಭಿಯಾನದ ಬಗ್ಗೆ ಟೀಕೆ ಮಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಕಾಂಗ್ರೆಸ್ ನಾಯಕರು ಯುವಕರಲ್ಲಿ ದೇಶಾಭಿಮಾನ ಮೂಡಿಸುವ ಬದಲು ಗೊಂದಲ ಮೂಡಿಸುತ್ತಿದ್ದಾರೆ. ಹಿಂದೆ ದೇಶದ ವಿಭಜನೆಗೆ ಕಾರಣರಾದವರು ಕಾಂಗ್ರೆಸ್ ನಾಯಕರು. ಜವಾಹರ್‌ಲಾಲ್ ನೆಹರೂ ದೇಶವನ್ನು ಮೂರು ಭಾಗ ಮಾಡಿದರು. ಅಂತವರನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೈಲಿಗೆ ಹೋಗಿ ಬಂದವರೆಲ್ಲ ಕಾಂಗ್ರೆಸ್ ನಾಯಕರಾಗುತ್ತಾರೆ. ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿಗೆ ಹೋಗಿ ಬಂದರು. ನಲಪಾಡ್ ಪರಪ್ಪನ ಅಗ್ರಹಾರದಲ್ಲಿ ಜೈಲು ವಾಸ ಅನುಭವಿಸಿದರು. ಹಿಂದೆ ಕಾಂಗ್ರೆಸ್ ನಾಯಕರು ಸ್ವಾತಂತ್ರೃಕ್ಕಾಗಿ ಜೈಲಿಗೆ ಹೋಗುತ್ತಿದ್ದರು. ಈಗಿನ ಪರಿಸ್ಥಿತಿ ಬೇರೆಯೇ ಇದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್‌ನವರು ಎಲ್ಲವನ್ನೂ ವಿರೋಧಿಸುವ ಪರಿಪಾಠ ಮುಂದುವರಿಸಿದರೆ ಜನ ಪ್ರತಿಪಕ್ಷ ಸ್ಥಾನದಿಂದಲೂ ಮನೆಗೆ ಕಳಿಸುತ್ತಾರೆ. ಸಿದ್ಧರಾಮೋತ್ಸವದಿಂದ ಬಿಜೆಪಿಗೆ ಹೆದರಿಕೆಯಾಗಿದೆ. ನನ್ನ ಬಗ್ಗೆ ಬಿಜೆಪಿಗೆ ಭಯ ಎನ್ನುವ ಸಿದ್ಧರಾಮಯ್ಯ. ಕಳೆದ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲುವುದಾಗಿ ಹೇಳಿದ್ದರು. ಆದರೆ ಅವರಿಗೆ ಸಿಕ್ಕಿದ್ದು ಒಂದೇ ಸ್ಥಾನ ಎಂದು ಲೇವಡಿ ಮಾಡಿದರು.