ಸತೀಶ್ ಜಾರಕಿಹೊಳಿ ಕ್ಷಮೆಗೆ ಈಶ್ವರಪ್ಪ ಒತ್ತಾಯ

kse 1
Published on

ಶಿವಮೊಗ್ಗ: ಹಿಂದು ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡದೇ ಇದ್ದರೆ ಕಾಂಗ್ರೆಸ್‌ನ ಕೆಲ ನಾಯಕರಿಗೆ ತಿಂದಿದ್ದು ಜೀರ್ಣವೇ ಆಗುವುದಿಲ್ಲ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಹಿಂದು ಎಂಬ ಪದದ ಅರ್ಥವೇ ಅಶ್ಲೀಲ ಎಂದು ಹೇಳಿರುವುದು ಕಾಂಗ್ರೆಸ್‌ನ ಹಿಂದು ವಿರೋಧಿ ನೀತಿಗೆ ನಿದರ್ಶನವಾಗಿದೆ ಎಂದು ಬಿಜೆಪಿ ಓಬಿಸಿ ಮೋರ್ಚಾದ ಉಸ್ತುವಾರಿ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಕೂಡ ಸತೀಶ್ ಜಾರಕಿಹೊಳಿ ಹೇಳಿಕೆ ಖಂಡಿಸಿದ್ದಾರೆ. ಆದರೆ ಜಾರಕಿಹೊಳಿ ಮಾತ್ರ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿರುವುದು ವಿಪರ್ಯಾಸ ಎಂದು ಹೇಳಿದರು.

ನನ್ನ ಮಾತಿಗೆ ಈಗಲೂ ಬದ್ಧ ಎನ್ನುತ್ತಿರುವ ಜಾರಕಿಹೊಳಿ ಸೊಕ್ಕಿನ ಪ್ರದರ್ಶನ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ನಿಜವಾಗಿಯೂ ಸಾಮರ್ಥ್ಯವಿದ್ದರೆ ಅವರನ್ನು ಪಕ್ಷದಿಂದ ಅಮಾನತು ಮಾಡಲಿ ಎಂದು ಸವಾಲು ಹಾಕಿದರು.

ಸತೀಶ್ ಜಾರಕಿಹೊಳಿ ಅವರು ಸೋನಿಯಾ ಗಾಂಧಿ ಹಾಗೂ ಮುಸಲ್ಮಾನರನ್ನು ಮೆಚ್ಚಿಸಲು ಈ ರೀತಿ ಮಾತನಾಡುತ್ತಿದ್ದಾರೆ. ವಾಲ್ಮೀಕಿ ಸಮುದಾಯದಲ್ಲಿ ಹುಟ್ಟಿರುವ ಜಾರಕಿಹೊಳಿ ಮೊದಲು ಹಿಂದು ಸಮಾಜದ ಕ್ಷಮೆ ಕೋರಬೇಕು. ಇಲ್ಲದೇ ಇದ್ದರೆ ಮುಂದಿನ ಚುನಾವಣೆಯಲ್ಲಿ ಹಿಂದುಗಳು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net