

ಶಿವಮೊಗ್ಗ: ಅಖಂಡವಾಗಿದ್ದ ಭಾರತವನ್ನು ಮೂರು ಭಾಗ ಮಾಡಿದ ಕಾಂಗ್ರೆಸ್ ಇಂದು ಭಾರತ್ ಜೋಡೊ ಪಾದಯಾತ್ರೆ ಮಾಡುತ್ತಿರುವುದು, ಭಾರತವನ್ನು ಒಗ್ಗೂಡಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಮಾತೆಯನ್ನ ತುಂಡರಿಸಿದ ಕಾಂಗ್ರೆಸ್ ಬಗ್ಗೆ ಜನರಲ್ಲಿ ಆಕ್ರೋಶವಿರುವ ಕಾರಣದಿಂದಲೇ ದೇಶದಲ್ಲಿ ಕಾಂಗ್ರೆಸ್‌ನ ಕೆಲವು ಕುರುಹುಗಳು ಉಳಿದುಕೊಂಡಿವೆ. ಪಾಕಿಸ್ತಾನ, ಬಾಂಗ್ಲಾ ದೇಶವನ್ನು ಸೇರಿಸಿ ಭಾರತವನ್ನು ಜೋಡಿಸಲು ಹೊರಟ್ಟಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದರೆ ಪಾದಯಾತ್ರೆ ಸಾರ್ಥಕವಾಗುತ್ತದೆ ಎಂದು ವ್ಯಂಗ್ಯವಾಡಿದರು.
ರಾಬರ್ಟ್ ವಾದ್ರಾ ದೇಶಕ್ಕೆ ಅಪಾರ ಕೊಡುಗೆ ನೀಡಿರುವುದಕ್ಕಾಗಿ ಪಾದಯಾತ್ರೆಯಲ್ಲಿ ಅವರ ಫೋಟೋ ಹಾಕಲಾಗಿದೆ ಎಂದು ಲೇವಡಿ ಮಾಡಿದ ಈಶ್ವರಪ್ಪ, ದೇಶವನ್ನು ಭಾಗ ಮಾಡಿದ ಗಾಂಧಿ ಕುಟುಂಬದವರ ಫೋಟೋವನ್ನು ಭಾರತ್ ಜೋಡೋ ಯಾತ್ರೆಯಲ್ಲಿ ಹಾಕಿಕೊಂಡಿರುವುದು ವಿಪರ್ಯಾಸ. ಇದು ರಾಹುಲ್ ಗಾಂಧಿ ಅವರ ಪಶ್ಚಾತ್ತಾಪದ ಪಾದಯಾತ್ರೆಯಾಗದಿರಲಿ ಎಂದು ಹೇಳಿದರು.
ಜನೋತ್ಸವದ ಬದಲು ಜನಸ್ಪಂದನೆ
ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ಸಂದರ್ಭದಲ್ಲಿ ಜನೋತ್ಸವ ಸಮಾವೇಶ ಆಯೋಜಿಸಲು ನಿರ್ಧರಿಸಲಾಗಿತ್ತು. ಈಗ ಅದನ್ನು ಜನಸ್ಪಂದನ ಹೆಸರಿನಲ್ಲಿ ನಡೆಸಲು ಉದ್ಧೇಶಿಸಲಾಗಿದೆ. ಸೆ.10ರಂದು ಚಿಕ್ಕಬಳ್ಳಾಪುರದಲ್ಲಿ ನಡೆಯುವ ಜನಸ್ಪಂದನ ಸಮಾವೇಶದಲ್ಲಿ ಮೂರು ಲಕ್ಷ ಮಂದಿ ಸೇರುವ ನಿರೀಕ್ಷೆಯಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ತಿಳಿಸಿದರು.