

ಶಿವಮೊಗ್ಗ:ಹಿಂದೆ ಬಿಜೆಪಿಯ ಹೋರಾಟದಲ್ಲಿ ಮಹಿಳೆಯರ ಸಂಖ್ಯೆ ಸೀಮಿತವಾಗಿತ್ತು. ಈಗ ಸಹಸ್ರ ಸಂಖ್ಯೆಯಲ್ಲಿ ಮಹಿಳಾ ಕಾರ್ಯಕರ್ತೆಯರು ಬಿಜೆಪಿಯಲ್ಲಿ ಸಕ್ರಿಯರಾಗಿದ್ದಾರೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಹೋರಾಟ ಮತ್ತು ಪಕ್ಷದ ವಿವಿಧ ಚಟುಚಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಕುಟುಂಬ ನಿರ್ವಹಣೆಯೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲೂ ಭಾಗವಹಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ವಾರಣಾಸಿಯಲ್ಲಿ ಮಸೀದಿಯೊಳಗೆ ಈಶ್ವರ ಲಿಂಗವಿತ್ತು. ಐವರು ಮಹಿಳೆಯರು ನಮಗೆ ಮಸೀದಿಯೊಳಗಿನ ಶಿವ ಲಿಂಗಕ್ಕೆ ಪೂಜೆ ಮಾಡಲು ಅನುಮತಿ ನೀಡಬೇಕೆಂದು ನ್ಯಾಯಾಲಯದ ಮೆಟ್ಟಿಲೇರಿದ್ದರ ಪರಿಣಾಮ ನ್ಯಾಯಾಲಯ ಮಸೀದಿ ಆವರಣದ ಸರ್ವೇಗೆ ಆದೇಶ ನೀಡಿತ್ತು. ಷರತ್ತು ಮೇರೆಗೆ ಪೂಜೆಗೂ ಅವಕಾಶ ನೀಡಿತು. ಇದು ಮಹಿಳೆಯರ ಸಾಮರ್ಥ್ಯಕ್ಕೆ ನಿದರ್ಶನವಾಗಿದೆ ಎಂದು ಹೇಳಿದರು.
ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವಿದ್ಯಾ ಲಕ್ಷೀಪತಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಕೋಷ್ಠಗಳ ಸಂಯೋಜಕ ಎಂ.ಬಿ.ಭಾನುಪ್ರಕಾಶ್, ಪ್ರಮುಖರಾದ ಪದ್ಮಿನಿ ರಾವ್, ರೇಣುಕಾ ನಾಗರಾಜ್, ಸುನೀತಾ ಜಗದೀಶ್, ಗೀತಾ ಸಂದಾನಂದ ಶೆಟ್ಟಿ, ಕಲ್ಪನಾ ತಲವಾಟ ಉಪಸ್ಥಿತರಿದ್ದರು.