

ರಾಯಚೂರು: ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ 10 ಕ್ಷೇತ್ರಗಳಲ್ಲಿ ಈಡಿಗ ಸಮುದಾಯದವರಿಗೆ ಟಿಕೆಟ್ ನೀಡಬೇಕು. ಇಲ್ಲದಿದ್ದರೆ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಶ್ರೀ ನಾರಾಯಣ ಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಮಾಜಿ ಸಿಎಂ ಸಿದ್ದರಾಮಯ್ಯ ಜತೆ ಮಾತನಾಡಲಾಗಿದ್ದು, ಸಮುದಾಯಕ್ಕೆ ಪ್ರಾತಿನಿಧ್ಯ ನೀಡದಿದ್ದಲ್ಲಿ ಏ.10ರ ನಂತರ ಸಭೆ ಸೇರಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕಾಂಗ್ರೆಸ್ ಪ್ರಕಟಿಸಿರುವ ಮೊದಲ ಪಟ್ಟಿಯಲ್ಲಿ ಸಮುದಾಯದ ಆರು ಜನರಿಗೆ ಟಿಕೆಟ್ ನೀಡಲಾಗಿದೆ. ಮಂಗಳೂರಿನ 8 ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ, ಉತ್ತರ ಕನ್ನಡ ಜಿಲ್ಲೆಯ 6 ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಹಾಗೂ ಶಿವಮೊಗ್ಗದ ಮೂರು ಕ್ಷೇತ್ರಗಳಲ್ಲಿ ಈಡಿಗ ಸಮುದಾಯದವರು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಸೇಡಂ, ಚಿತ್ತಾಪುರ, ಚಿಂಚೋಳಿ, ಯಾದಗಿರಿ, ಗಂಗಾವತಿ ಸೇರಿ 10 ಕ್ಷೇತ್ರಗಳಲ್ಲಿ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 10 ಕ್ಷೇತ್ರಗಳಲ್ಲಿ ಈಡಿಗ ಸಮುದಾಯದವರಿಗೆ ಟಿಕೆಟ್ ನೀಡಗಬೇಕು ಎಂದು ಡಾ.ಪ್ರಣವಾನಂದ ಸ್ವಾಮೀಜಿ ಆಗ್ರಹಿಸಿದರು. ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರಗೌಡ, ಪದಾಧಿಕಾರಿಗಳಾದ ಮಹೇಶಗೌಡ, ವೆಂಕಟೇಶ ಇದ್ದರು.