ಪಿಯುಸಿ ಫಲಿತಾಂಶ ಉತ್ತಮ ಸ್ಥಾನದಲ್ಲಿರಲಿ: ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ಸಲಹೆ

Educational workshop Mandya
Published on

ಮಂಡ್ಯ: ಈ ಬಾರಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆ ಉತ್ತಮ ಸ್ಥಾನಕ್ಕೆ ಬರುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ಸಲಹೆ ನೀಡಿದರು.

ನಗರದ ಎಸ್.ಬಿ.ಸಮುದಾಯ ಭವನದಲ್ಲಿ ಶಿಕ್ಷಣ ಇಲಾಖೆ(ಪದವಿ ಪೂರ್ವ), ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರ, ಪ್ರತಿಭಾ ಪುರಸ್ಕಾರ ಮತ್ತು ಶೇ.100ರಷ್ಟು ಫಲಿತಾಂಶ ನೀಡಿದ ಕಾಲೇಜುಗಳ ಉಪನ್ಯಾಸಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ ಸಾಲಿನ ಫಲಿತಾಂಶ ತೃಪ್ತಿಕರವಾಗಿರಲಿಲ್ಲ. ಆದ್ದರಿಂದ ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಉತ್ತಮ ಫಲಿತಾಂಶ ನಿಟ್ಟಿನಲ್ಲಿ ಉಪನ್ಯಾಸಕರು ಶ್ರಮ ವಹಿಸಿ ವಿದ್ಯಾರ್ಥಿಗಳನ್ನು ಸಧೃಡಗೊಳಿಸಿ ಎಂದರು.

ಉಪನ್ಯಾಸಕರ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು. ಮದ್ದೂರು ತಾಲೂಕಿನಲ್ಲಿ ಮೂವರು ಎಂಎಲ್‌ಸಿಗಳಿದ್ದೇವೆ. ನಾವೆಲ್ಲ ಒಂದೆ, ಚುನಾವಣೆಯಲ್ಲಿ ಮಾತ್ರ ಪಕ್ಷಗಳ ಅಂತರವಿರುತ್ತದೆ. ಆದ್ದರಿಂದ ಕಾಲೇಜುಗಳ ಅಭಿವೃದ್ದಿಯತ್ತ ಗಮನ ಹರಿಸೋಣ. ಉಪನ್ಯಾಸಕರ ಮೆಡಿಕಲ್ ಬಿಲ್‌ಗಳನ್ನು ಸರ್ಕಾರದಿಂದ ಭರಿಸಲು ಸದನದಲ್ಲಿ ಒತ್ತಾಯ ಮಾಡುತ್ತೇವೆ. ಮಾತ್ರವಲ್ಲದೆ ಆರ್ಥಿಕ ಇಲಾಖೆ ಗಮನ ಸಳೆಯಲಾಗುವುದು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ರಾಜಕಾರಣವನ್ನು ಚುನಾವಣೆ ಬಂದಾಗ ಮಾಡೋಣ. ಚುನಾವಣೆ ಮುಗಿದ ಬಳಿಕ ಎಲ್ಲರೂ ಒಟ್ಟಾಗಿ ಸಾಗೋಣ. ಉಪನ್ಯಾಸಕರ ಸಮಸ್ಯೆಗಳು ಬಂದಾಗ ಎಲ್ಲವನ್ನೂ ಬಗೆಹರಿಸುವುದು ನಮ್ಮ ಜವಾಬ್ದಾರಿಯಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸರಿಪಡಿಸೋಣ ಎಂದರು.

ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್ ಮಾತನಾಡಿ, ಜಗತ್ತಿನಲ್ಲಿ ಎಐ ತಂತ್ರಜ್ಞಾನ ಬಳಕೆಯಾಗುತ್ತಿದೆ. ಪರಿಣಾಮ ಉದ್ಯೋಗ ನಾಶವಾಗುತ್ತಿದೆ. ಉಪನ್ಯಾಸಕರ ಕಲಿಕೆ ನಿರಂತರವಾಗಿರಲಿ. ಈ ಮೂಲಕ ಜ್ಞಾನವನ್ನು ವಿಸ್ತಾರಗೊಳಸಿಬೇಕಿದೆ ಎಂದು ಸಲಹೆ ನೀಡಿದರು.

ಡಿಡಿಪಿಯು ಚೆಲುವಯ್ಯ, ಎಸ್.ಬಿ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಎ.ಎಚ್.ನಿಂಗೇಗೌಡ, ಉಪಾಧ್ಯಕ್ಷ ಹನುಮಂತಯ್ಯ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ನಾಗೇಶ್, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಚನ್ನಕೃಷ್ಣಯ್ಯ, ಕಾರ್ಯಾಧ್ಯಕ್ಷ ವೆಂಕಟೇಗೌಡ, ಕಾರ್ಯದರ್ಶಿ ರವೀಂದ್ರ, ಖಜಾಂಚಿ ಬಿ.ಎಸ್.ಲತಾ, ಪ್ರಾಂಶುಪಾಲರ ಸಂಘದ ಅಧ್ಯಕ್ಷ ನಟರಾಜು, ಕಾರ್ಯದರ್ಶಿ ಕಾಂತರಾಜು, ಖಜಾಂಚಿ ಹನುಮಂತು, ಬಡ್ತಿ ಉಪನ್ಯಾಸಕರ ಸಂಘದ ಅಧ್ಯಕ್ಷ ಕೆ.ಶಿವಲಿಂಗಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net