ಶಾಲೆಗಳಿಗೆ ಸೌಕರ್ಯ ಕಲ್ಪಿಸಲು ಸರ್ಕಾರ ವಿಫಲ

mkg1c
Published on

ಹರಿಹರ: ಪಠ್ಯ ಪುಸ್ತಕ ಪರಿಷ್ಕರಣೆಗೆ ಆಸಕ್ತಿ ತೋರಿಸುವ ರಾಜ್ಯ ಸರ್ಕಾರ ಶಾಲೆಗಳ ಮೂಲಸೌಕರ್ಯ ನೀಡುವಲ್ಲಿ ವಿಫಲವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಆರೋಪಿಸಿದರು.

ನಗರದ ಎಸ್‌ಜೆವಿಪಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಮಂಗಳವಾರ ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಹಮ್ಮಿಕೊಂಡಿದ್ದ ಶೈಕ್ಷಣಿಕ ಕಾರ್ಯಾಗಾರ, ಶೇ.100ರಷ್ಟು ಫಲಿತಾಂಶ ಶಾಲೆಗಳ ಶಿಕ್ಷಕಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲೂ ಹಿಡನ್ ಅಜೆಂಡಾ ಜಾರಿ ಮಾಡುತ್ತಿದೆ. ನಿಯಮದ ಪ್ರಕಾರ ಎನ್‌ಸಿಆರ್‌ಟಿಸಿ ಒಪ್ಪಿದ ಪಠ್ಯವನ್ನು ಮಕ್ಕಳಿಗೆ ಬೋಧನೆ ಮಾಡಬೇಕು. ಆದರೆ, ಈ ಸರ್ಕಾರ ಸಂಪುಟದಲ್ಲಿ ಒಪ್ಪಿಗೆ ಪಡೆದು ಪಠ್ಯ ಪುಸ್ತಕವನ್ನು ಪರಿಷ್ಕರಣೆ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಎಸ್‌ಎಸ್‌ಎಲ್‌ಸಿ ಪಾಸಾದವರ ಸಂಖ್ಯೆಯೇ ಜಾಸ್ತಿ ಇದೆ ಎಂದ ಅವರು, ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಮಾಡುವುದನ್ನು ಸರ್ಕಾರ ಬಿಡಬೇಕು ಎಂದು ಒತ್ತಾಯಿಸಿದರು.

ಶಿಕ್ಷಕರಿಗೆ ಶೈಕ್ಷಣಿಕ ಕೆಲಸಕ್ಕಿಂತ ಆಡಳಿತಾತ್ಮಕ ಕೆಲಸಗಳೇ ಜಾಸ್ತಿಯಾಗಿದೆ. ತಂತ್ರಜ್ಞಾನಕ್ಕೆ ತಕ್ಕಂತೆ ಇಲಾಖೆಯ ವ್ಯವಸ್ಥೆಯನ್ನು ಸರಳೀಕರಣಗೊಳಿಸಬೇಕಿದೆ. ಆಡಳಿತಕ್ಕಿಂತ ಜ್ಞಾನವಂತ ನೀಡುವತ್ತ ಗಮನ ಹರಿಸಬೇಕಿದೆ ಎಂದರು.

ಮಗು ಮುಕ್ತ ವಾತಾವರಣದಲ್ಲಿ ಶಿಕ್ಷಣ ಕಲಿಯುವಂತಾಗಬೇಕು. ಆದರೆ, ಇಂದು ಅಂಕ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡುವುದನ್ನು ಬಿಟ್ಟು ಜ್ಞಾನ ಆಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕಿದೆ ಎಂದು ಹೇಳಿದರು.

ಶಿಕ್ಷಕರು ಉತ್ತಮ ಸಮಾಜ ನಿರ್ಮಿಸುವಂಥ ಕೆಲಸ ಮಾಡುತ್ತಾರೆ. ವಿದ್ಯೆ, ಜ್ಞಾನ ಮತ್ತು ಗುರುವಿಗೆ ಗೌರವ ನೀಡದಿರುವ ಅದೆಷ್ಟೋ ದೇಶಗಳು ನಶಿಸುತ್ತಿವೆ. ಶಿಕ್ಷಕರನ್ನು ಗೌರವಿಸುವ ಸಮಾಜಕ್ಕೆ ಉತ್ತಮ ಭವಿಷ್ಯವಿದೆ ಎಂದರು.

ಹಗರಿಭೊಮ್ಮನಹಳ್ಳಿಯ ಶಿಕ್ಷಕ ಆರ್.ಬಿ.ಬಸವರಾಜ್ ವ್ಯಕ್ತಿತ್ವ ವಿಕಸನ ಕುರಿತು ಉಪನ್ಯಾಸ ನೀಡಿದರು. ತಾಲೂಕಿನ ಶೇ. 100 ಫಲಿತಾಂಶ ಬಂದ ಐದು ಶಾಲೆಯ 50 ಶಿಕ್ಷಕರಿಗೆ, ಅತಿ ಹೆಚ್ಚು ಅಂಕ ಪಡೆದ ಐದು ವಿದ್ಯಾರ್ಥಿಗಳು ಹಾಗೂ ಪ್ರತಿಭಾವಂತ ಶಿಕ್ಷಕರ ಮಕ್ಕಳಿಗೆ ಸನ್ಮಾನಿಸಲಾಯಿತು.

ಡಿಡಿಪಿಐ ಜಿ.ಆರ್. ತಿಪ್ಪೇಶಪ್ಪ, ಬಿಇಒ ಹನುಮಂತಪ್ಪ, ಎಸ್‌ಜೆವಿಪಿ ಸಂಸ್ಥೆಯ ಕಾರ್ಯದರ್ಶಿ ಆರ್.ಟಿ.ಪ್ರಶಾಂತ, ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಉಪಾಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ಜಿಲ್ಲಾಧ್ಯಕ್ಷ ಮುಬಾರಕ್ ಅಲಿ, ತಾಲೂಕು ಘಟಕದ ಅಧ್ಯಕ್ಷ ಈಶಪ್ಪ ಬೂದಿಹಾಳ್, ಎಸ್. ದ್ವಾರಕೀಶ್ ನಾಯ್ಕ, ಬಿ.ಪಿ.ಉಮೇಶ್, ಎಸ್.ಕೃಷ್ಣಮೂರ್ತಿ ಶ್ರೇಷ್ಠಿ, ಬಿ.ಸಿದ್ದರಾಮೇಶ್, ಡಿ.ಟಿ. ತಿಪ್ಪಣ್ಣರಾಜು, ಅಂಗಡಿ ರೇವಣಸಿದ್ದಪ್ಪ, ಶ್ರೀಧರಮಯ್ಯ, ರಾಮಕೃಷ್ಣಪ್ಪ, ಎನ್.ಡಿ ಧನ್ಯಕುಮಾರ್, ಶರಣಕುಮಾರ್ ಹೆಗಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net