

ವಿಜಯಪುರ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮತ್ತು ಶಾಲೆಗಳಿಗೆ ಮೂಲ ಸೌಲಭ್ಯ ಒದಗಿಸುವ ಮೂಲಕ ಸಚಿವ ಎಂ. ಬಿ. ಪಾಟೀಲರು ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಕುಮಾರ ದೇಸಾಯಿ ಹೇಳಿದರು.
ಬಬಲೇಶ್ವರ ತಾಲೂಕಿನ ಜೈನಾಪುರ ಗ್ರಾಮದಲ್ಲಿ ಎಂ.ಬಿ. ಪಾಟೀಲ ಫೌಂಡೇಷನ್ ವತಿಯಿಂದ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರ ಜನ್ಮದಿನದ ಹಿನ್ನೆಲೆಯಲ್ಲಿ ಗಂಡು ಮಕ್ಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದು ಮತ್ತು ಆರನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಚಿವರು ಜನಪರ ಕಾರ್ಯಕ್ರಮಗಳ ಮೂಲಕ ಈ ಭಾಗದಲ್ಲಿ ಹೆಚ್ಚೆಚ್ಚು ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿದ್ದಾರೆ. ಆ ಮೂಲಕ ಸರ್ವಜನರ ಏಳಿಗೆಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಸಚಿವರ ಆಪ್ತ ಸಹಾಯಕ ದಶರಥ ಭೋಸ್ಲೆ ಮಾತನಾಡಿ, ಹಿಂದೆ ಜಲಸಂಪನ್ಮೂಲ ಸಚಿವರಾಗಿ ನೀರಾವರಿ ಕ್ರಾಂತಿ ಮಾಡಿರುವ ಎಂ.ಬಿ. ಪಾಟೀಲರು, ಸದ್ಯ ಕೈಗಾರಿಕೆ ಸಚಿವರಾಗಿ ಕೈಗಾರಿಕೆ ಕ್ರಾಂತಿ ಮಾಡುತ್ತಿದ್ದಾರೆ. ಅಲ್ಲದೆ, ಖಾಸಗಿ ಕಂಪನಿಗಳ ಸಿಎಸ್‌ಆರ್ ಫಂಡ್ ಮೂಲಕ ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಅನುದಾನ ಒದಗಿಸಿ ಶೈಕ್ಷಣಿಕ ಕ್ರಾಂತಿಗೆ ಕಾರಣರಾಗಿದ್ದಾರೆ ಎಂದರು.
ಶಿಕ್ಷಣ ಸಂಯೋಜಕ ಪ್ರಭು ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಿಸಲಾಯಿತು.
ಗ್ರಾಪಂ ಅಧ್ಯಕ್ಷ ಸಂಗಮೇಶ ಬೀಳಗಿ, ಜಗನ್ನಾಥ ಹಿರೇದೇಸಾಯಿ, ಪ್ರಶಾಂತ ದೇಸಾಯಿ, ಹಣಮಂತ ಚೋಳಾಪ್ಪಗೋಳ, ಶ್ರೀಶೈಲ ತುಪ್ಪದ, ಸದಾನಂದ ಮಂಟೂರ, ಅಮೀತ ದೇಸಾಯಿ, ಉತಾಲಸಾಬ ಬೆಳ್ಳಗಿ, ಎಸ್‌ಡಿಎಂಸಿ ಅಧ್ಯಕ್ಷ ಭರಮಪ್ಪ ಕಲ್ಲವ್ವಗೋಳ, ವಸಂತ ಚವಾಣ, ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ ಕೋರೆ, ವಿ.ಎಸ್. ನಿಂಗರಡ್ಡಿ, ಎಚ್.ಎಂ. ಚಿತ್ತರಗಿ, ಎ.ಎಸ್. ರೂಪರಾವರ, ಸಂಗಮೇಶ ಕೋಲಕಾರ ಮತ್ತಿತರರಿದ್ದರು.