

ದಾವಣಗೆರೆ: ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಹುದ್ದೆಗಳಿಗೆ ತಾತ್ಕಾಲಿಕ ನೇಮಕಗೊಂಡಿರುವ ಅತಿಥಿ ಶಿಕ್ಷಕರು ಹಾಗೂ ಗೌರವಧನ ಶಿಕ್ಷಕರಿಗೆ ನಗರದ ಡಯಟ್ ಸಂಸ್ಥೆಯಲ್ಲಿ ಸೋಮವಾರ ಒಂದು ದಿನದ ಶೈಕ್ಷಣಿಕ ಪುನಶ್ಚೇತನ ಕಾರ್ಯಾಗಾರ ನಡೆಯಿತು.
ಡಯಟ್ ಪ್ರಾಚಾರ್ಯೆ ಎಸ್.ಗೀತಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ ಗುಣಾತ್ಮಕ ಶಿಕ್ಷಣದ ಪ್ರಗತಿಗೆ ಶಿಕ್ಷಕರ ಜವಾಬ್ದಾರಿ ತಿಳಿಸಿದರು. ಹಿರಿಯ ಉಪನ್ಯಾಸಕಿ ಎನ್. ಲೋಲಾಕ್ಷಿ ಮಾದರಿ ಪಾಠ ಯೋಜನೆ ಕುರಿತು ಪರಿಚಯಿಸಿದರು. ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕಿ ಎಂ.ಶಶಿಕಲಾ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳಲ್ಲಿ ಮಾಹೆವಾರು ನಡೆಸಬೇಕಾದ ಚಟುವಟಿಕೆ ಬಗ್ಗೆ ವಿವರಿಸಿದರು.
ವಿಜ್ಞಾನ ವಿಷಯ ಪರಿವೀಕ್ಷಕಿ ವಸಂತಕುಮಾರಿ ವಿವಿಧ ಹಂತಗಳಲ್ಲಿ ಕೈಗೊಳ್ಳಬೇಕಾದ ಮೌಲ್ಯಮಾಪನ ವಿಧಾನ ಹಾಗೂ ದಾಖಲೆಗಳ ನಿರ್ವಹಣೆ ಕುರಿತು ಮಾಹಿತಿ ಹಂಚಿಕೊಂಡರು. ಡಯಟ್ ಉಪನ್ಯಾಸಕಿ ಎಸ್.ಆರ್. ಪೂರ್ಣಿಮಾ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪರಿಹಾರ ಬೋಧನೆ ಅಗತ್ಯತೆ ಮತ್ತು ವಿಧಾನ ತಿಳಿಸಿದರು.
ವಿರಾಮದ ನಂತರದ ಅವಧಿಯಲ್ಲಿ ವಿಷಯವಾರು ಶಿಕ್ಷಕರನ್ನು ವಿವಿಧ ಗುಂಪುಗಳಾಗಿ ವಿಂಗಡಿಸಿ ಶೈಕ್ಷಣಿಕ ಗುಣಮಟ್ಟ ಹಾಗೂ ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗೆ ಅಳವಡಿಸಿಕೊಳ್ಳಬೇಕಾದ ಬೋಧನಾ ವಿಧಾನಗಳ ಬಗ್ಗೆ ಗುಂಪು ಚರ್ಚೆ ನಡೆಸಿ ಮಾರ್ಗದರ್ಶಿಸಲಾಯಿತು.
ಡಯಟ್‌ನ ಎಲ್ಲ ಅನುಷ್ಠಾನಾಧಿಕಾರಿಗಳು ಇದ್ದರು. ಡಯಟ್‌ನ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಎಚ್.ಆರ್. ವಿಶಾಲಾಕ್ಷಿ ಸ್ವಾಗತಿಸಿದರು.