

ಕೊಳ್ಳೇಗಾಲ: ಪಟ್ಟಣದ ನ್ಯಾಷನಲ್ ಮೈದಾನದಲ್ಲಿ ಸೋಮವಾರ ಪ್ರವಾಸೋದ್ಯಮ ಇಲಾಖೆ ಆಯೋಜಿಸಿರುವ ಸರ್ಕಾರಿ ಶಾಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ 5 ದಿನಗಳ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮಕ್ಕೆ ನಗರಸಭೆ ಅಧ್ಯಕ್ಷ ರೇಖಾ ರಮೇಶ್ ಚಾಲನೆ ನೀಡಿದರು.
ವಿವಿಧ ಶಾಲೆಗಳಲ್ಲಿ ಓದುವ ಸುಮಾರು 110 ವಿದ್ಯಾರ್ಥಿ ಕರ್ನಾಟಕ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆ ನೆರವಿನಿಂದ ಪ್ರವಾಸ ಕಾರ್ಯಕ್ರಮ ನಡೆಯುತ್ತಿದ್ದು, ಈ ಪ್ರವಾಸ ಮಕ್ಕಳ ಶೈಕ್ಷಣಿಕ ಪ್ರಗತಿಗೂ ಅನುಕೂಲವಾಗಲಿದೆ. 5 ದಿನಗಳ ಕರ್ನಾಟಕ ದರ್ಶನ ಪ್ರವಾಸ ಸುಖಕರವಾಗಿರಲಿ ಎಂದು ಹಾರೈಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಮಾತನಾಡಿ, ಪ್ರವಾಸೋದ್ಯಮ ಇಲಾಖೆ ವತಿಯಿಂದ ಐದು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದ್ದು ಬೆಂಗಳೂರು, ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಕುಷ್ಠಗಿ, ಚಿತ್ರದುರ್ಗ ಸೇರಿದಂತೆ ಇತರ ಪ್ರವಾಸಿ ಸ್ಥಳಗಳಿಗೆ ತೆರಳುವ ಎರಡು ಸಾರಿಗೆ ಬಸ್‌ಗಳಲ್ಲಿ 110 ವಿದ್ಯಾರ್ಥಿಗಳು ಹಾಗೂ ನಾಲ್ಕು ಶಿಕ್ಷಕರು ತೆರಳುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಬಿ.ಆರ್.ಸಿ ಮಹದೇವ ಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೋಸೆಫ್ ಅಲೆಕ್ಸಾಂಡರ್, ಕಾರ್ಯದರ್ಶಿ ಚಿಕ್ಕರಾಜು, ನಿರ್ದೇಶಕ ಹರೀಶ್, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಕ್ಬರ್, ಕಾರ್ಯದರ್ಶಿ ನಂಜುಂಡಸ್ವಾಮಿ, ಎಸ್‌ಸಿ-ಎಸ್‌ಟಿ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದರಾಜು, ನೋಡಲ್ ಅಧಿಕಾರಿ ಬಸವರಾಜು, ಪ್ರವಾಸೋದ್ಯಮ ಇಲಾಖೆಯ ಸಂಯೋಜಕ ಸಚಿನ್, ಶಿಕ್ಷಕ ಹರೀಶ್, ಚೇತನ್ ಕುಮಾರ್, ಮಂಗಳಾ, ಕುಮಾರಿ ಸೇರಿದಂತೆ ಇತರರಿದ್ದರು.