

ಚಿತ್ರದುರ್ಗ: ಜಿಲ್ಲೆಯ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು.
ಚಿತ್ರದುರ್ಗ ತಾಲೂಕಿನ ಕೂನಬೇವು ಗ್ರಾಮದಲ್ಲಿ ಬುಧವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡದ ನೂತನ ಕೊಠಡಿಗೆ ಭೂಮಿ ಪೂಜೆ, ಚಿಕ್ಕಪ್ಪನಹಳ್ಳಿ, ಹಿರೇಕಬ್ಬಿಗೆರೆ, ಚಿಕ್ಕಗೊಂಡನಹಳ್ಳಿ ಗ್ರಾಮಗಳ ಸಿಸಿ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಅಂದಾಜು 11 ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಲಾಗಿದೆ. ಶೈಕ್ಷಣಿಕ ಪ್ರಗತಿಯಿಂದ ಸಾಮಾಜಿಕ ಪರಿವರ್ತನೆ ಸಾಧ್ಯ. ಈ ಪ್ರಗತಿಯನ್ನಾಧರಿಸಿ ಸಮಾಜದ ಭವಿಷ್ಯ ನಿಂತಿದೆ. ಶಾಲೆ ಒಂದು ಸಾಮಾಜಿಕ ಪರಿವರ್ತನೆಯಾಗ ಬೇಕು. ಮಕ್ಕಳ ಶಿಕ್ಷಣಕ್ಕೆ ಪೂರಕ ವಾತಾವರಣ ಸೃಷ್ಟಿಸುವ ದೊಡ್ಡ ಜವಾಬ್ದಾರಿ ಪಾಲಕರು ಮತ್ತು ಶಿಕ್ಷಕರ ಮೇಲಿದೆ ಎಂದರು.
ಚಳ್ಳಕೆರೆ ನಗರ ಮತ್ತು ಗ್ರಾಮೀಣ ಭಾಗದಲ್ಲಿ 380ಕ್ಕೂ ಹೆಚ್ಚು ನೂತನ ಶಾಲಾ, ಕಾಲೇಜು ಕೊಠಡಿಗಳನ್ನು ನಿರ್ಮಿಸಲಾಗಿದೆ. ಕೂನಬೇವಲ್ಲಿ 72 ಲಕ್ಷ ರೂ. ವೆಚ್ಚದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 4 ನೂತನ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ ಎಂದರು.
ಚಿಕ್ಕಗೊಂಡನಹಳ್ಳಿಯಿಂದ ಚಿಕ್ಕಪ್ಪನಹಳ್ಳಿವರೆಗೆ 4.50 ಕೋಟಿ ರೂ.ವೆಚ್ಚದಲ್ಲಿ 7ಕಿ.ಮೀ.,ಮಾಳೇನಹಳ್ಳಿಯಿಂದ ಹಿರೇಕಬ್ಬಿಗೆರೆ, ಶಿವನಕೆರೆ ದೇವಸ್ಥಾನವರಗೆ 4 ಕೋಟಿ ರೂ.ವೆಚ್ಚದಲ್ಲಿ ರಸ್ತೆಗಳು ಹಾಗೂ ಚಿಕ್ಕಗೊಂಡನಳ್ಳಿಯಲ್ಲಿ 1 ಕೋಟಿ ರೂ.ವೆಚ್ಚದಲ್ಲಿ ಮತ್ತು ಹಿರೇಕಬ್ಬಿಗೆರೆಯಲ್ಲಿ 20 ಲಕ್ಷದ ವೆಚ್ಚ ದೊಂದಿಗೆ ಸಿಸಿ ರಸ್ತೆಗಳನ್ನು ನಿರ್ಮಿಸಲಾಗುವುದು ಎಂದರು.
ತಾಪಂ ಇಒ ರವಿಕುಮಾರ್, ಬಿಇಒ ಎಸ್.ನಾಗಭೂಷಣ್, ಉಪ ತಹಸೀಲ್ದಾರ್ ಪ್ರಕಾಶ್, ಜಿಪಂ ಮಾಜಿ ಸದಸ್ಯ ಬಾಬುರೆಡ್ಡಿ, ಕೂನಬೇವು ಗ್ರಾಪಂ ಅಧ್ಯಕ್ಷೆ ಪದ್ಮಕ್ಕ, ಮಾಡನಾಯಕನಹಳ್ಳಿ ಗ್ರಾಪಂ ಅಧ್ಯಕ್ಷ ರಾಜೇಶ್ ಇತರರಿದ್ದರು.