

ಶಿವಮೊಗ್ಗ: ಶೈಕ್ಷಣಿಕ ಸಾಲ ಕೊಡುವುದಾಗಿ ಮತ್ತು ವರ್ಕ್ ಫ್ರಂ ಹೋಮ್ ಹೆಸರಲ್ಲಿ ಮಹಿಳೆ ಸೇರಿ ಇಬ್ಬರು ಬರೋಬ್ಬರಿ 34.44 ಲಕ್ಷ ರೂ. ವಂಚನೆಗೆ ಒಳಗಾಗಿದ್ದಾರೆ. ಭದ್ರಾವತಿ ಹಳೇನಗರದ ಎನ್‌ಎಂಸಿಯ 39 ವರ್ಷದ ಮಹಿಳೆ ಮತ್ತು ಹೊಸನಗರ ತಾಲೂಕಿನ ಅಂಡಗದೋದೂರಿನ 48 ವರ್ಷದ ಎಚ್.ಟಿ.ವೀರೇಂದ್ರ ವಂಚನೆಗೆ ಒಳಗಾಗಿದ್ದು ಲಕ್ಷಾಂತರ ರೂ. ಹಣ ಕಳೆದುಕೊಂಡು ಇದೀಗ ಶಿವಮೊಗ್ಗ ಸೈಬರ್ ಠಾಣೆ ಮೆಟ್ಟಿಲೇರಿದ್ದಾರೆ.
ಅಂಡಗದೋದೂರಿನ ವೀರೇಂದ್ರ ಅವರು ಪಶ್ಚಿಮ ಬಂಗಾಳದ ಕಂಪನಿ ಹೆಸರಲ್ಲಿ ವರ್ಕ್ ಫ್ರಂ ಹೋಮ್ ಮಾಡಲು ಮೊಬೈಲ್‌ಗೆ ಬಂದ ಲಿಂಕ್ ಕ್ಲಿಕ್ ಮಾಡಿದ್ದರು. ವಿವಿಧ ಟಾಸ್ಕ್ ನೀಡಿ ಆನ್‌ಲೈನ್‌ನಲ್ಲಿ ಗೂಡ್ಸ್‌ಗಳನ್ನು ಖರೀದಿಸಿ ಮಾರಾಟ ಮಾಡುವ ಕೆಲಸವಿದ್ದು ಲಾಭಾಂಶ ನೀಡುವುದಾಗಿ ನಂಬಿಸಿದ್ದರು. ವಂಚಕರ ಮಾತು ನಂಬಿದ ವೀರೇಂದ್ರ ಅವರು ಎರಡು ಬ್ಯಾಂಕ್ ಖಾತೆಯಿಂದ ಅ.4ರಿಂದ ನ.11ರವರೆಗೆ 22,16,635 ರೂ. ಹಾಕಿದ್ದರು.
ಮತ್ತೊಂದು ಪ್ರಕರಣದಲ್ಲಿ ಚಾರಿಟೇಬಲ್ ಹೆಸರಲ್ಲಿ ಶೈಕ್ಷಣಿಕ ಸಾಲ ಕೊಡುವುದಾಗಿ ಮಗಳ ಇ- ಮೇಲ್‌ಗೆ ಬಂದ ಸಂದೇಶ ನಂಬಿದ ಮಹಿಳೆ 12,28,200 ರೂ. ಹಾಕಿ ವಂಚನೆಗೆ ಒಳಗಾಗಿದ್ದಾರೆ. ಅ.11ರಿಂದ ಅ.17ರವರೆಗೆ ವಂಚಕರು ಹಲವು ಖಾತೆಗಳಿಗೆ ಹಣ ಹಾಕಿಕೊಂಡು ಮೋಸ ಮಾಡಿದ್ದಾರೆ. ಈ ಬಗ್ಗೆ ಶಿವಮೊಗ್ಗ ಸೈಬರ್ ಠಾಣೆಗೆ ಪ್ರತ್ಯೇಕ ದೂರು ದಾಖಲಾಗಿವೆ.