

ಉಪ್ಪುಂದ: ಕರಾವಳಿ ಶಿಕ್ಷಣಕ್ಕೆ ಹೆಸರು ಪಡೆದಿದ್ದು, ಗುಣಮಟ್ಟದ ಶಿಕ್ಷಣ, ಸೌಲಭ್ಯ ಸಿಗುವ ನಂಬಿಕೆಯಿಂದ ಹೊರ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ನಮ್ಮಲ್ಲಿಗೆ ಆಗಮಿಸುತ್ತಾರೆ. ಆದರೆ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಲಿಯುವ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ವಿದ್ಯಾಸಂಸ್ಥೆಗಳ ಮೇಲಿನ ನಿರ್ಲಕ್ಷ್ಯ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ಹೇರಂಜಾಲು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಗುರುವಾರ ಭೇಟಿ ನೀಡಿ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿ ಮಾತನಾಡಿದರು.
ವಸತಿ ನಿಲಯ ಹಾಗೂ ತರಗತಿ ಕೋಣೆಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು, ಇದರ ಬಗ್ಗೆ ಮುಂಜಾಗೃತ ಕ್ರಮಕೈಗೊಳ್ಳದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಮಾತನಾಡಿದ ಶಾಸಕ ಗಂಟಿಹೊಳೆ, ಕಟ್ಟಡಗಳ ಅವವಸ್ಥೆಗೆ ಕಾರಣರಾದವರ ಮಾಹಿತಿ, ತುರ್ತು ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದರು. ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಜಿಲ್ಲಾಧಿಕಾರಿ ಉತ್ತರಿಸಿದರು.
* ಪ್ರತಿಭಟನೆ ಎಚ್ಚರಿಕೆ: ವಿವಿಧ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ವಾತನಾಡಿದ ಶಾಸಕ ಗಂಟಿಹೊಳೆ, ಮಕ್ಕಳಿಗೆ ಬಿಸಿ ನೀರಿನ ವ್ಯವಸ್ಥೆ, ವಿದ್ಯುತ್ ಉಪಕರಣಗಳ ದುರಸ್ತಿ, ಸೋಲಾರ್ ವ್ಯವಸ್ಥೆ, ಶಾಲೆಗಳ ತುರ್ತು ಬೇಡಿಕೆ ಹಾಗೂ ಶಾಶ್ವತ ಕ್ರಮ ಆಗಬೇಕು. ಕಟ್ಟಡ ಲೋಪದೋಷಗಳಿಗೆ ಹೊಣೆಗಾರರು ಯಾರೆಂದು ಪತ್ತೆಹಚ್ಚಿ ತಪ್ಪಿತಸ್ಥರ ಮೇಲೆ ಒಂದು ವಾರದೊಳಗೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಸ್ಥಳೀಯರು ಹಾಗೂ ಪಾಲಕರ ಜತೆ ಶಾಲೆ ಎದುರು ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ಶಾಲೆ ಪ್ರಾಂಶುಪಾಲೆ ಕಮಲಾ ಕೆ.ವಿ., ಸಹಾಯಕ ಇಂಜಿನಿಯರ್ ಚಂದ್ರಮೋಹನ, ಅಕ್ಷಯ, ಪ್ರಮುಖರಾದ ಸುರೇಶ ಬಟವಾಡಿ, ರಾಜು ದೇವಾಡಿಗ, ಸುಕೇಶ ಶೆಟ್ಟಿ, ಗಣೇಶ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.