ಶಿಕ್ಷಣಸಂಸ್ಥೆಗಳು ಮಕ್ಕಳನ್ನು ಪ್ರೋತ್ಸಾಹಿಸುವಂತಾಗಲಿ: ವಾಯುದಳದ ಫ್ಲೈಟ್ ಲೆಫ್ಟಿನೆಂಟ್ ಶ್ರಾವಣಿ ಭಾರ್ಗವ್

15
Published on

ಮೈಸೂರು: ಪ್ರತಿ ಮಕ್ಕಳಲ್ಲೂ ನಾಯಕತ್ವ ಹೊರಹೊಮ್ಮುವ ಸಾಮರ್ಥ್ಯ ಇದ್ದೇ ಇರುತ್ತದೆ. ಅದನ್ನು ಉತ್ತೇಜಿಸುವ ವೇದಿಕೆ ನಿರ್ಮಿಸಿ ಅವರು ನಾಯಕತ್ವದ ಗುಣ ಬೆಳೆಸಿಕೊಳ್ಳಲು ಪ್ರೇರೇಪಣೆ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದು ವಾಯುದಳದ ಫ್ಲೈಟ್ ಲೆಫ್ಟಿನೆಂಟ್ ಶ್ರಾವಣಿ ಭಾರ್ಗವ್ ಅಭಿಪ್ರಾಯಪಟ್ಟರು.

ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ಕನಕದಾಸನಗರದ ದಟ್ಟಗಳ್ಳಿ ಕ್ಯಾಂಪಸ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಜ್ಞಾ ವಿಧಿ ಸಮಾರಂಭದಲ್ಲಿ ಧ್ವಜವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಕ್ರಿಯಾಶೀಲತೆಯಲ್ಲಿ ಬದ್ಧತೆ ಹೆಚ್ಚಿಸಲು ನಾಯಕತ್ವದ ಗುಣ ಪ್ರೋತ್ಸಾಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಂಘಟನೆ, ಸಹಭಾಗಿತ್ವ ಹಾಗೂ ರಚನಾತ್ಮಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳೇ ಆಯೋಜಿಸುವಂತೆ ಸೂಕ್ತ ಮಾರ್ಗದರ್ಶನ ನೀಡಬೇಕು. ವಿಶ್ವದ ಮುಂಚೂಣಿ ರಾಷ್ಟ್ರಗಳಲ್ಲಿ ಭಾರತ ಅಗ್ರಸ್ಥಾನದತ್ತ ಮುನ್ನುಗ್ಗುತ್ತಿದ್ದು ಈ ಸಂದರ್ಭದಲ್ಲಿ ಭವಿಷ್ಯತ್ತಿನ ಜವಾಬ್ದಾರಿಯುತ ಪ್ರಜೆಗಳನ್ನು ರೂಪಿಸುವುದು ಶಿಕ್ಷಣ ಸಂಸ್ಥೆಗಳ ಆದ್ಯ ಕರ್ತವ್ಯವಾವಗಿದ್ದು, ಹಿಂದೆಂದಿಗಿಂತಲೂ ಇಂದು ರಾಷ್ಟ್ರನಿಷ್ಠೆಯ ಸಮರ್ಪಣಾ ಗುಣ ಭವಿಷ್ಯತ್ತಿನ ಮಕ್ಕಳು ರೂಢಿಸಿಕೊಳ್ಳುವಂತಾಗಲು ಶಿಸ್ತು, ಸಂಯಮ ಮೈಗೂಡಿಸಿಕೊಳ್ಳುವಂತೆ ಪ್ರೇರಣಾದಾಯಕ ಕಾರ್ಯಕ್ರಮಗಳು ಶಿಕ್ಷಣ ಚಟುವಟಿಕೆಯ ಭಾಗವಾಗಬೇಕು ಎಂದು ಹೇಳಿದರು.

ದೇಶ ಬೆಳೆದಂತೆ ಸವಾಲುಗಳೂ ಅಷ್ಟೇ ಪ್ರಮಾಣದಲ್ಲಿ ಎದುರಾಗುತ್ತವೆ. ಈ ನಿಟ್ಟಿನಲ್ಲಿ ಭಾರತೀಯರು ತಮ್ಮ ಮಕ್ಕಳಿಗೆ ದೇಶಕಟ್ಟುವ ರಾಷ್ಟ್ರಪ್ರೇಮವನ್ನು ಪ್ರೇರೇಪಿಸಲು ಬೆಂಬಲವಾಗಿ ನಿಲ್ಲಬೇಕೆಂದು ಇದೇ ಸಂದರ್ಭದಲ್ಲಿ ಹೇಳಿದರು.

ಆರ್.ಟಿ. ನಗರ ಕ್ಯಾಂಪಸ್‌ನಲ್ಲಿ ನಡೆದ ಪ್ರತಿಜ್ಞಾ ವಿಧಿ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ, ಕ್ರೀಡೆ ಮತ್ತು ವಿಜ್ಞಾನ ವಿಭಾಗದ ಪ್ರೊ. ಎಸ್. ಮದಿ ಅಲಗನ್ ಅವರು ಧ್ವಜವಂದನೆ ಸ್ವೀಕರಿಸುವ ಮೂಲಕ ಉದ್ಘಾಟಿಸಿದರು. ಪ್ರತಿಜ್ಞಾ ವಿಧಿ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದಕಗಳನ್ನು ತೊಡಿಸಿ, ಪ್ರತಿಜ್ಞಾ ನುಡಿಗಳನ್ನು ಬೋಧಿಸಿ, ವಿವಿಧ ಹುದ್ದೆಗಳನ್ನು ನೀಡಿ ಜವಾಬ್ದಾರಿಯನ್ನು ವಹಿಸಲಾಯಿತು.

ಶಾಲೆಯ ಪ್ರಾಂಶುಪಾಲ ಎಂ.ಎನ್. ಮಹೇಂದ್ರ , ಉಪ ಪ್ರಾಂಶುಪಾಲೆಯಲಾದ ಶೀನಾ ಗುರ್ನಾನಿ, ಶಾಲಿನಿ ಮಾಜೋ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net