ಡಿ.2ರಿಂದ ಶೈಕ್ಷಣಿಕ ವಸ್ತುಪ್ರದರ್ಶನ

sammelana
ಕುಂದಾಪುರದಲ್ಲಿ ನಡೆಯಲಿರುವ ಬೃಹತ್ ಶೈಕ್ಷಣಿಕ ಮಾಹಿತಿ ಮತ್ತು ವಸ್ತು ಪ್ರದರ್ಶನದ ಪೂರ್ವಭಾವಿ ಸಭೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆಯಲ್ಲಿ ನಡೆಯಿತು.
Published on

ಕುಂದಾಪುರ: ಭಂಡಾರ್‌ಕಾರ್ಸ್‌ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಡಿ.2ರಿಂದ 5ರ ತನಕ ಬೃಹತ್ ಶೈಕ್ಷಣಿಕ ಮಾಹಿತಿ, ವಸ್ತು ಪ್ರದರ್ಶನ ನಡೆಯಲಿದ್ದು, ಮಂಗಳವಾರ ಪೂರ್ವಭಾವಿ ಸಭೆ ಜರುಗಿತು.

ಶಾಸಕ ಕಿರಣ್‌ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳಿಗೆ ಬಹಳಷ್ಟು ವಿಷಯಗಳ ಬಗ್ಗೆ ಮಾಹಿತಿಗಳ ಕೊರತೆ ಇದ್ದು, ಅವರ ಭವಿಷ್ಯದ ದೃಷ್ಟಿಯಿಂದ ಈ ಕಾರ‌್ಯಕ್ರಮ ಆಯೋಜಿಸಲಾಗಿದೆ ಎಂದರು.

ಕುಂದಾಪುರ, ಬೈಂದೂರು ವಿಧಾನಸಭಾ ಕ್ಷೇತ್ರದ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ, ಶೈಕ್ಷಣಿಕ ಮಾಹಿತಿ, ವಸ್ತು ಪ್ರದರ್ಶನ, ವೃತ್ತಿ ಮಾರ್ಗದರ್ಶನ ನೀಡಲು ನಿರ್ಧರಿಸಲಾಗಿದ್ದು, ಎಲ್ಲಾ ಸರ್ಕಾರಿ ಇಲಾಖೆಗಳ ಸಹಭಾಗಿತ್ವದಲ್ಲಿ ಈ ಬೃಹತ್ ಶೈಕ್ಷಣಿಕ, ವಸ್ತು ಪ್ರದರ್ಶನ ನಡೆಯಲಿದೆ ಎಂದರು.

ಭಂಡಾರ್ಕಾರ್ಸ್ ಕಾಲೇಜಿನ ವಿವಿಧ ವಿಭಾಗಗಳಿಂದ ವಸ್ತುಪ್ರದರ್ಶನ ನಡೆಸಲು ನಿರ್ಧರಿಸಲಾಗಿದೆ. ಸಾರ್ವಜನಿಕ ವಲಯದಲ್ಲಿರುವ ಬ್ಯಾಂಕ್‌ಗಳು, ವಾಣಿಜ್ಯ, ಕೈಗಾರಿಕೆ, ಕುಶಲ ಕಲೆ ಮುಂತಾದ ವಿಷಯಗಳ ಕುರಿತು ಮಳಿಗೆ ತೆರೆಯಲು ಅವಕಾಶವಿದೆ ಎಂದು ಯು.ಎಸ್.ಶೆಣೈ ಮಾಹಿತಿ ನೀಡಿದರು.

ಕುಂದಾಪುರ ತಾಲೂಕು ತಹಸೀಲ್ದಾರ್ ಶೋಭಾಲಕ್ಷ್ಮೀ, ಭಂಡಾರ್‌ಕಾರ್ಸ್‌ ಕಾಲೇಜು ವಿಶ್ವಸ್ಥ ಮಂಡಳಿ ಸದಸ್ಯರಾದ ಶಾಂತಾರಾಮ ಪ್ರಭು, ಪ್ರಕಾಶ್ ಸೋನ್ಸ್, ಸದಾನಂದ ಚಾತ್ರ, ರಾಜೇಂದ್ರ ತೋಳಾರ್, ಪದವಿ ಕಾಲೇಜು ಪ್ರಾಂಶುಪಾಲ ಡಾ.ಶುಭಕರಾಚಾರಿ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ, ರಕ್ಷಕ-ಶಿಕ್ಷಕ ಸಂಘ ಅಧ್ಯಕ್ಷ ಸದಾನಂದ ಕಾಮತ್, ಪ್ರಾಕ್ತನ ವಿದ್ಯಾರ್ಥಿ ಸಂಘ ಅಧ್ಯಕ್ಷ ಶ್ರೀಹರಿ ಚಾತ್ರ, ಕಚೇರಿ ವ್ಯವಸ್ಥಾಪಕ ಗೋಪಾಲ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net