

ಗಂಗಾವತಿ: ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ಶಾಲಾ ವಾಹನ ಒದಗಿಸಲಾಗಿದ್ದು, ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ವಾತಾವರಣ ಮೂಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಬಿಜೆಪಿ ಧುರೀಣೆ ಗಾಲಿ ಲಕ್ಷ್ಮೀ ಅರುಣಾ ಹೇಳಿದರು.
ತಾಲೂಕಿನ ರಂಗಾಪುರ (ಜಂಗ್ಲಿ)ದಲ್ಲಿ ಶಾಲಾವಾಹನಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಚುನಾವಣೆ ಪ್ರಚಾರ ಸಂದರ್ಭದಲ್ಲಿ ಸುತ್ತಮುತ್ತಲಿನ ಭಾಗದ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗುತ್ತಿರುವ ಬಗ್ಗೆ ಗಮನಕ್ಕಿದ್ದು, ವಾಹನ ಒದಗಿಸುವ ಭರವಸೆ ನೀಡಲಾಗಿತ್ತು. ಅದರಂತೆ ವಿಶ್ವಭಾರತಿ ಕಲಾನಿಕೇತನ ಮತ್ತು ಶಿಕ್ಷಣ ಸಂಸ್ಥೆಯಿಂದ ವಾಹನ ಒದಗಿಸಿದ್ದು, ಚಿಕ್ಕರಾಂಪುರ, ರಂಗಾಪುರ, ಜಂಗ್ಲಿ, ರಂಗಾಪುರ ಕ್ಯಾಂಪ್ ಭಾಗದ ವಿದ್ಯಾರ್ಥಿಗಳು ಉಚಿತವಾಗಿ ಸಂಚರಿಸಬಹುದಾಗಿದೆ. ಈ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ಮೂಲಕ ಸಾಧನೆ ಮಾಡಬೇಕಿದ್ದು, ಗ್ರಾಮೀಣ ಭಾಗದ ಶೈಕ್ಷಣಿಕ ಬೆಳವಣಿಗೆಗೆ ಮೂಲ ಸೌಕರ್ಯ ಒದಗಿಸುವಂತೆ ಶಾಸಕ ಗಾಲಿ ಜನಾರ್ದನರೆಡ್ಡಿಯರವರಿಗೆ ಮನವಿ ಮಾಡಲಾಗುವುದು ಎಂದರು.
ವಾಹನಕ್ಕೆ ಪೂಜೆ ಸಲ್ಲಿಸಿದ ನಂತರೆ ಆನೆಗೊಂದಿಯ ಶಾಲೆವರಿಗೂ ಮಕ್ಕಳೊಂದಿಗೆ ಸಂಚರಿಸುವ ಮೂಲಕ ಕಲಿಕೆಗೆ ಪ್ರೇರಣೆ ನೀಡಿದರು.