

ರಾಯಚೂರು: ಯಾವುದೇ ಒಂದು ಪ್ರದೇಶ ಕೇವಲ ಭೌತಿಕವಾಗಿ ಅಭಿವೃದ್ಧಿಯಾದರೆ ಸಾಲದು, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿಯೂ ಅಭಿವೃದ್ಧಿಯಾದಾಗ ಮಾತ್ರ ಸಂಪೂರ್ಣವಾಗಿ ಅಭಿವೃದ್ಧಿಯಾಗಲು ಸಾಧ್ಯವಾಗಲಿದೆ ಎಂದು ನಿವೃತ್ತ ಐಎಎಸ್ ಅಕಾರಿ ಜಿ.ಕುಮಾರ ನಾಯಕ ಹೇಳಿದರು.
ಸ್ಥಳೀಯ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಎಸ್‌ಕೆಇ ಪ್ಯಾರಾ ಮೆಡಿಕಲ್ ಕಾಲೇಜಿನ 17ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಯಚೂರಿನಲ್ಲಿ ಭೌತಿಕವಾಗಿ ಬದಲಾವಣೆಯಾಗಿದ್ದರೂ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ಕಾಣಬೇಕಾಗಿದೆ ಎಂದರು.
ಬಡ ಜನರ, ರೈತರ, ಕೂಲಿ ಕಾರ್ಮಿಕರ ಹಾಗೂ ಯುವಜನರಿಗೆ ಹೊಸ ಯೋಜನೆಗಳನ್ನು ಜಿಲ್ಲೆಗೆ ತರುವ ಪ್ರಯತ್ನವನ್ನು ಮಾಡಬೇಕಾಗಿದೆ. ಅಕಾರದಲ್ಲಿದ್ದಾಗ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದು, ನಿವೃತ್ತಿಯ ನಂತರವೂ ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಹೇಳಿದರು.
ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಡಾ.ಬಸವರಾಜ ಕಳಸ ಮಾತನಾಡಿ, ಜಿಲ್ಲೆಯಲ್ಲಿ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಖಾಸಗಿ ಆಸ್ಪತ್ರೆಗಳ ಸುಲಿಗೆಯಿಂದಾಗಿ ಬಡವರಿಗೆ ಚಿಕಿತ್ಸೆ ದೊರೆಯದಂತಾಗಿದೆ. ಏಮ್ಸ್ ಸ್ಥಾಪನೆಯಾದರೆ ಬಡವರಿಗೆ ಗುಣಮಟ್ಟದ ಚಿಕಿತ್ಸೆ ದೊರೆಯಲು ಅನುಕೂಲವಾಗಿಲಿದೆ ಎಂದರು.
ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಎಸ್‌ಕೆಇ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಬಾಬುರಾವ್ ಶೇಗುಣಸಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪ್ರೊ.ಚಂದ್ರಶೇಖರ, ರಶ್ಮಿ ನಾಗೋಲಿ, ಸ್ವಪ್ನ, ರೇವಯ್ಯ ಹಿರೇಮಠ ಉಪಸ್ಥಿತರಿದ್ದರು.