ಪರಿಸರ ನಾಶ ಪ್ರಕೃತಿಗಷ್ಟೇ ಅಪಾಯವಲ್ಲ: ಲೇಖಕಿ ನೇಮಿಚಂದ್ರ ಎಚ್ಚರಿಕೆ

Educational conference Mandya
Published on

ಮಂಡ್ಯ: ಮನುಷ್ಯ ಮಾಡುವ ಪರಿಸರ ನಾಶದಿಂದ ಕೇವಲ ಪ್ರಕೃತಿಗಷ್ಟೇ ಅಪಾಯವಲ್ಲ. ಮುಖ್ಯವಾಗಿ ಪರಿಸರಕ್ಕೆ ಯಾವುದು ಅಪಾಯವೋ ನಮ್ಮ ಆರೋಗ್ಯಕ್ಕೂ ತೊಂದರೆಯಾಗುತ್ತದೆ ಎನ್ನುವುದನ್ನು ಮರೆಯಬಾರದು ಎಂದು ಲೇಖಕಿ ನೇಮಿಚಂದ್ರ ಎಚ್ಚರಿಕೆ ನೀಡಿದರು.

ನಗರದ ಗಾಂಧಿಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಹಾಗೂ ಪದವಿ ಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರ ವೇದಿಕೆ ವತಿಯಿಂದ ಏರ್ಪಡಿಸಿದ್ದ ಶೈಕ್ಷಣಿಕ ಸಮ್ಮೇಳನ ಮತ್ತು ನೂತನ ಮಾದರಿ ಪ್ರಶ್ನೆ ಪತ್ರಿಕೆ ಕಾರ್ಯಾಗಾರದಲ್ಲಿ ‘ಆಧುನಿಕ ಬದುಕಿನ ತಲ್ಲಣಗಳಿಗೆ ಆಯ್ಕೆಗಳೇ’ ವಿಷಯ ಬಗ್ಗೆ ಉಪನ್ಯಾಸ ನೀಡಿದ ಅವರು, ಪರಿಸರ ನಾಶ ಮಾಡದೆ ಇರುವ ಆಯ್ಕೆ ನಮ್ಮ ಕೈಯಲ್ಲಿದೆ. ಮಂಡ್ಯದ ಕಬ್ಬು ನಮ್ಮ ಸಂಸ್ಕೃತಿ. ಗಾಂಧಿ, ಬುದ್ಧ, ಮಹಾವೀರ ಅವರಂತವರು ನಮ್ಮ ಹೃದಯದಲ್ಲಿ ಇರಬೇಕು. ಅವರು ನಡೆಸಿದ ಹಾದಿ ನಮ್ಮದಾಗಬೇಕು. ಆದರೆ ಬಳಸಿ ಬಿಸಾಡುವುದು ನಮ್ಮ ಸಂಸ್ಕೃತಿ ಅಲ್ಲ. ಒಂದು ಗುಟುಕು ನೀರನ್ನು ಕುಡಿದು ಬಳಸಿದ ಬಾಟಲಿ ಬಿಸಾಡುವುದು ನಮ್ಮ ಸಂಸ್ಕೃತಿಯಾಗುವುದು ಬೇಡ. ಬಳಸಿ ಬಿಸಾಡುವ ಸಂಸ್ಕೃತಿಯ ಭಾಗವಾಗಲು ನಾನು ಇಷ್ಟಪಡುವುದಿಲ್ಲ ಎಂದರು.

ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್‌ನಲ್ಲಿ ಟಾಕ್ಸಿಕ್ ರಾಸಾಯನಿಕ ಮತ್ತು ಮೈಕ್ರೋ ಪ್ಲಾಸ್ಟಿಕ್‌ನ ಕಣಗಳು ಇವೆ ಎಂಬುದು ಅಧ್ಯಯನದಿಂದ ಗೊತ್ತಾಗಿದೆ. ಅದನ್ನು ಯಾವುದೋ ತಾಪಮಾನ ಮತ್ತು ಸಮಯದಲ್ಲಿ ಉತ್ಪಾದನೆ ಮಾಡುತ್ತಾರೆ. ಅದನ್ನು ನಾವು ಯಾವಾಗಲೋ ಬಳಸುತ್ತೇವೆ. ಆ ಅಂತರದಲ್ಲಿ ಅದರಲ್ಲಿ ಸಾಕಷ್ಟು ವ್ಯತ್ಯಾಸಗಳು ಆಗಿರುತ್ತವೆ. ನೀರು ಕೊಡುವ ನಾಡು ನಮ್ಮದು. ಆದ್ದರಿಂದ ನೀರು ಮಾರುವುದು ದಂಧೆಯಾಗುವುದು ಬೇಡ. ಅಂತಹ ಉದ್ಯಮವನ್ನು ಒಂದು ಭಾಗವಾಗಿ ಪ್ರೋತ್ಸಾಹಿಸುವುದು ಬೇಡ. ಬದುಕು ಬದಲಿಸಬಹುದು ಕೃತಿಯಲ್ಲಿ ’ಆಯ್ಕೆಯಿದೆ ನಮ್ಮ ಕೈಯಲ್ಲಿ’ ಎಂಬುದು ಪಿಯುಸಿ ಪಠ್ಯದಲ್ಲಿದೆ. ನಾನು ಪಠ್ಯಕ್ಕಾಗಿ ಪರೀಕ್ಷೆಗಳಿಗಾಗಿ ಇದನ್ನು ಬರೆದದ್ದಲ್ಲ. ಅದು ಬದುಕಿನ ಪಾಠವಾಗಿತ್ತು. ಇಂದೂ ಸಹ ಎಷ್ಟೋ ಬದುಕಿನ ಪಾಠಗಳನ್ನು ನಾನು ಕಲಿತಿರುವುದಿಲ್ಲ. ಬೇರೆ ಸಾಧಕರ ಬದುಕಿನ ಪಾಠ, ಅನುಭವವನ್ನು ಪಡೆದುಕೊಂಡು ಬರೆದಿದ್ದೇನೆ. ನನಗೆ ಸ್ಫೂರ್ತಿ ಮತ್ತು ಪ್ರೇರಣೆಯಾದ ಸಕಾರಾತ್ಮಕ ವ್ಯಕ್ತಿಗಳ ಅನುಭವಗಳ ಕಥೆಯನ್ನು ಹಂಚಿಕೊಳ್ಳಲು ನಾನು ಬಳಸಿಕೊಂಡ ಮಾಧ್ಯಮ ಬರಹವಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಯು.ಎಸ್.ನಟರಾಜು ಮಾತನಾಡಿ, ಕನ್ನಡ ಶಿಕ್ಷಕರು ನಾಡಿನ ಭಾಷೆಯ ರಕ್ಷಕರು. ಮಕ್ಕಳಲ್ಲಿ ನೈತಿಕ, ಮಾನವೀಯ, ಸಮಾಜಮುಖಿ ಬೆಳವಣಿಗೆಗೆ ತೊಡಗುವಂತೆ ಮಾಡುವ ಕರ್ತವ್ಯ ಮುಖ್ಯ. ಕನ್ನಡ ಮಾತೃಭಾಷೆ ಬೆಳೆಸಿ ಉಳಿಸುವುದು ನಮ್ಮ ಆದ್ಯ ಕರ್ತವ್ಯ. ಕನ್ನಡದಲ್ಲಿ ಕಲಿತರೆ ಕೀಳರಿಮೆ ಎಂಬ ಭಾವನೆ ಇದೆ. ಪಾಲಕರು ಆಂಗ್ಲ ಮಾಧ್ಯಮಕ್ಕೆ ಮಾರುಹೋಗದೆ ಕನ್ನಡ ಭಾಷೆ, ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ ಕೆಲಸ ಮಾಡಬೇಕು ಎಂದು ನುಡಿದರು.

ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ವೇದಿಕೆಯ ಅಧ್ಯಕ್ಷ ಲೋಕೇಶ್ ಬೆಕ್ಕಳಲೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಗೌರವಾಧ್ಯಕ್ಷ ಎಚ್.ಎಸ್.ಚಂದ್ರಶೇಖರಯ್ಯ ಭಾಗವಹಿಸಿದ್ದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಚೆಲುವಯ್ಯ, ಉಪನ್ಯಾಸಕರ ವೇದಿಕೆಯ ಎಂ.ಆರ್.ರವಿ, ಮಾಲಿನಿ, ಅಜಿತ್‌ಕುಮಾರ್ ಇತರರಿದ್ದರು.

ಮಧ್ಯಾಹ್ನದ ಎರಡನೇ ಅವಧಿಯಲ್ಲಿ ಹಾಸನ ಜಿಲ್ಲೆಯ ಆಲೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕ ಕೆ.ರೋಹಿತ್ ’ನೂತನ ಮಾದರಿ ಪ್ರಶ್ನೆ ಪತ್ರಿಕೆ ಮತ್ತು ನೀಲ ನಕ್ಷೆ ಅನ್ವಯಿಕತೆ’ ಕುರಿತು ಉಪನ್ಯಾಸ ನೀಡಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಪನ್ಯಾಸಕರ ಸಂಘದ ಅಧ್ಯಕ್ಷ ಚನ್ನಕೃಷ್ಣಯ್ಯ ಪ್ರತಿಭಾ ಪುರಸ್ಕಾರ ನೀಡಿದರು. ವೇದಿಕೆಯ ಪದಾಧಿಕಾರಿಗಳಾದ ಕೆ.ಟಿ.ಪುಷ್ಪಲತಾ, ವಿನೋದ್‌ಸಿಂಗ್, ಪೂರ್ಣ, ಆರ್.ರವೀಂದ್ರ, ಡಿ.ಪಿ.ವೆಂಕಟೇಗೌಡ, ಕೆ.ಪಿ.ಮೃತ್ಯುಂಜಯ, ಸರ್ವಶ್ರೀ, ಎನ್‌ಪಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ.ಸಿದ್ದರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net