ಪಿಎಂ ಉಷಾ ಯೋಜನೆ ಅಡಿ ಬೆಂವಿವಿಯಲ್ಲಿ ಶೈಕ್ಷಣಿಕ, ಸಂಶೋಧನಾ ಭವನ: ಭವನದಿಂದ ಏನೆಲ್ಲ ಉಪಯೋಗ? ಎಷ್ಟು ಕೋಟಿ ರೂ.ಗಳ ಕಟ್ಟಡ? ಇಲ್ಲಿದೆ ಮಾಹಿತಿ

DKS PM usha
Published on

ಬೆಂಗಳೂರು: ಪಿಎಂ - ಉಷಾ ಯೋಜನೆ ಅಡಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದಲ್ಲಿ ನಿರ್ಮಾಣವಾಗುತ್ತಿರುವ ‘ಶೈಕ್ಷಣಿಕ ಭವನ ಮತ್ತು ಸಂಶೋಧನಾ ಭವನ’ದ ಶಂಕುಸ್ಥಾಪನೆಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ನೆರವೇರಿಸಿದರು.

ಕೇಂದ್ರ ಸರ್ಕಾರ ಪಿಎಂ ಉಷಾ ಯೋಜನೆಯಡಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ 100 ಕೋಟಿ ರೂ. ಅನುದಾನ ಘೋಷಿಸಲಾಗಿತ್ತು.ಈ ಅನುದಾನದಲ್ಲಿ ಶೇ.60 ಕೇಂದ್ರ ಸರ್ಕಾರ ಮತ್ತು ಶೇ.40 ರಾಜ್ಯ ಸರ್ಕಾರವು ಭರಿಸುತ್ತದೆ. ಯೋಜನೆ ಅಡಿಯಲ್ಲಿ ಮೂಲಸೌಕರ್ಯ ನಿರ್ಮಾಣದಡಿಯಲ್ಲಿ ಶೈಕ್ಷಣಿಕ ಭವನ ಮತ್ತು ಸಂಶೋಧನಾ ಭವನವನ್ನು ಅಂದಾಜು ವೆಚ್ಚ 58 ಕೋಟಿ ರೂ.ಗಳಲ್ಲಿ ನಿರ್ಮಿಸಲಾಗುತ್ತಿದೆ.

ಶೈಕ್ಷಣಿಕ ಭವನವು 107376 ಚ.ಅಡಿಗಳ ವಿಸ್ತೀರ್ಣ ಹೊಂದಿದ್ದು ಮೂರು ಅಂತಸ್ತಿನ ಕಟ್ಟಡವಾಗಿದೆ. ಈ ಶೈಕ್ಷಣಿಕ ಕಟ್ಟಡದಲ್ಲಿ ಡಿಜಿಟಲ್ ಶಿಕ್ಷಣ, ದೂರಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಗಣಿತ ಶಾಸ್ತ್ರ ಸೇರಿ ಆಧುನಿಕ ವಿಷಯಗಳ ಕುರಿತು ಅಧ್ಯಯನ ನಡೆಸಲು ಬಳಸಲಾಗುತ್ತದೆ.

ಸಂಶೋಧನಾ ಭವನವು 16163 ಚ.ಅಡಿಗಳ ವಿಸ್ತೀರ್ಣವಿದ್ದು ಎರಡು ಅಂತಸ್ತಿನ ಕಟ್ಟಡವಾಗಿದೆ. ಈ ಸಂಶೋಧನಾ ಭವನದಲ್ಲಿ ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಸಮಾನತೆ, ಪರಿಸರ ಸಂರಕ್ಷಣೆ, ಸುಸ್ಥಿರ ಅಭಿವೃದ್ಧಿ, ಹವಾಮಾನ ಬದಲಾವಣೆ, ಮಾನವ ಬುದ್ದಿಮತ್ತೆ ಸೇರಿ ಆಧುನಿಕ ಶಿಕ್ಷಣ ವ್ಯವಸ್ಥೆಗೆ ಪೂರಕವಾಗುವ ವಿಷಯಗಳ ಕುರಿತು ಸುದೀರ್ಘ ಸಂಶೋಧನೆ ನಡೆಸಲಾಗುವುದು. ವಿದ್ಯಾರ್ಥಿಗಳಿಗೆ ಐಪಿಆರ್, ಪೇಟೆಂಟ್, ಸಂಶೋಧನಾ ಪ್ರಕಟಣೆಗಳಿಗೆ ಕುರಿತು ಮಾಹಿತಿ ಒದಗಿಸಲಾಗುವುದು.

ವಿನ್ಯಾಸ ಬದಲಾವಣೆಗೆ ಸೂಚನೆ:

ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ .ಶಿವಕುಮಾರ್, ಪಿಎಂ ಉಷಾ ಯೋಜನೆಯಡಿ ಶೈಕ್ಷಣಿಕ ಭವನ ಮತ್ತು ಸಂಶೋಧನಾ ಭವನ ನಿರ್ಮಾಣವಾಗುತ್ತಿದೆ. ಕಟ್ಟಡ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆ ಮಾಡಲು ಸಲಹೆ ನೀಡಿದ್ದೇನೆ. ಬೆಂ.ವಿವಿ ವಿಶ್ವದೆಲ್ಲೆಡೆ ಅಪಾರ ಹೆಸರು ಗಳಿಸಿದೆ, ಈ ಹಿಂದೆ ನಾನು ಕೂಡ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯನಾಗಿದ್ದೆ, ಇಂದು ಭೂಮಿ ಪೂಜೆ ನೆರವೇರಿಸಿರುವುದು ಸಾಕಷ್ಟು ಸಂತಸ ತಂದಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಮುನಿರತ್ನ, ಬೆಂವಿವಿ ಕುಲಪತಿ ಡಾ. ಎಸ್.ಎಂ. ಜಯಕರ, ಕುಲಸಚಿವ ಶೇಕ್ ಲತ್ೀ, ಮೌಲ್ಯಮಾಪನ ಕುಲಸಚಿವ ಸಿ. ಶ್ರೀನಿವಾಸ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net