

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಒಂದು ಕಾಲದಲ್ಲಿ ಕಷ್ಟ, ಅಸ್ಪಶ್ಯತೆ ತಾಂಡವವಾಡುತ್ತಿದ್ದ ನಮ್ಮ ಸಮಾಜ ಇಂದು ಈ ಹಂತಕ್ಕೆ ಬರಲು ಸಂಘಟನೆಯೇ ಕಾರಣ. ಸಮಾಜ ಕಟ್ಟುವವರು ಗರಿಕೆ ಹುಲ್ಲು ಕೂಡ ಬೆಳೆಯಲು ಬಿಡದ ನೀಲಗಿರಿ ಮರದಂತಾಗಬಾರದು. ತಾನು ಬೀಳುವಾಗ ಗೊನೆ ಹಾಕಿ ಮತ್ತೆ ಮೂರು ಗಿಡಗಳನ್ನು ಹುಟ್ಟುಹಾಕುವ ಬಾಳೆ ಗಿಡದಂತೆ ಇರಬೇಕು ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.
ಉಳ್ಳಾಲದ ಬ್ರಹ್ಮಶ್ರೀ ಬಿಲ್ಲವ ವೇದಿಕೆ, ಬ್ರಹ್ಮಶ್ರೀ ಮಹಿಳಾ ವೇದಿಕೆ ವತಿಯಿಂದ ಭಾನುವಾರ ನಡೆದ 24ನೇ ವರ್ಷದ ಶೈಕ್ಷಣಿಕ ದತ್ತು ಸ್ವೀಕಾರ, ಬ್ರಹ್ಮಶ್ರೀ ಪ್ರಶಸ್ತಿ ಪ್ರದಾನ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತೊಕ್ಕೊಟ್ಟು ಸಮೀಪದ ಕಾಪಿಕಾಡ್‌ನಲ್ಲಿ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದ.ಕ. ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ಭಾಸ್ಕರ ಎಸ್.ಕೋಟ್ಯಾನ್ ಅಧ್ಯಕ್ಷತೆ ವಹಿಸಿ, ಪ್ರಸ್ತುತ ದಿನಗಳಲ್ಲಿ ಬಿಲ್ಲವ ಸಣ್ಣ ಸಮಾಜವಲ್ಲ. ಎರಡೂ ಜಿಲ್ಲೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದೇವೆ. ಸಮಾಜದಲ್ಲಿ ಉನ್ನತ ಹುದ್ದೆಯಲ್ಲಿ ಹಲವರಿದ್ದರೂ ಸಮಾಜಕ್ಕೆ ಗುರುತಿಸುವ ಕಾರ್ಯ ಮಾಡುವವರ ಕೊರತೆಯಿದೆ ಎಂದರು.
ಮುಂಬಯಿಯ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಸುವರ್ಣ ಅವರಿಗೆ ಬ್ರಹ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಟ್ರಸ್ಟಿ ಜಗದೀಪ್ ಡಿ.ಸುವರ್ಣ, ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ಮಂಗಳೂರು ಉಪವಿಭಾಗ 1ರ ಅಬಕಾರಿ ಡಿವೈಎಸ್ಪಿ ಗಾಯತ್ರಿ ಸುವರ್ಣ, ಉದ್ಯಮಿ ಪ್ರವೀಣ್ ಸುವರ್ಣ, ಬಿಲ್ಲವ ಬ್ರಿಗೇಡ್‌ನ ಸದಾನಂದ ಪೂಜಾರಿ, ಬ್ರಹ್ಮಶ್ರೀ ಮಹಿಳಾ ವೇದಿಕೆ ಅಧ್ಯಕ್ಷೆ ಗಂಗಾ ಆನಂದ್, ಬಿ.ಸಿ.ರೋಡು ಅನ್ನಪೂರ್ಣೇಶ್ಚರಿ ದೇವಸ್ಥಾನದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಮೊದಲಾದವರು ಉಪಸ್ಥಿತರಿದ್ದರು.
ಜೀವನ್ ಕುಮಾರ್ ತೊಕ್ಕೊಟ್ಟು ಸ್ವಾಗತಿಸಿದರು. ಬ್ರಹ್ಮಶ್ರೀ ಬಿಲ್ಲವ ವೇದಿಕೆ ಅಧ್ಯಕ್ಷ ಕೆ.ಟಿ.ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ್ ಕರ್ಕೇರ ದತ್ತು ಸ್ವೀಕಾರ, ಹರೀಶ್ ಮುಂಡೋಳಿ ಸಾಧಕ ವಿದ್ಯಾರ್ಥಿಗಳ ಹೆಸರು ವಾಚಿಸಿದರು. ಆನಂದ ಕೆ.ಅಸೈಗೋಳಿ ಪ್ರಶಸ್ತಿ ಪತ್ರ ವಾಚಿಸಿದರು. ಲಕ್ಷ್ಮಣ ಪೂಜಾರಿ ವಂದಿಸಿದರು.
ಉಳ್ಳಾಲದ 23 ಗ್ರಾಮಕ್ಕೆ ಸೀಮಿತಗೊಳಿಸಿ ಪ್ರತಿಯೊಂದು ಗ್ರಾಮಕ್ಕೆ ಭೇಟಿ ನೀಡಿ ಆರ್ಥಿಕ ಪರಿಸ್ಥಿತಿ ಅವಲೋಕಿಸಿ 8ರಿಂದ 10ನೇ ತರಗತಿವರೆಗಿನ ಶೈಕ್ಷಣಿಕ ಸಾಮಗ್ರಿ ನೀಡಿ ಅರ್ಧ ವರ್ಷ ಕಳೆದಾಗ ಟ್ಯೂಷನ್ ನೀಡಲಾಗುತ್ತಿದೆ. ಜತೆಗೆ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಸಾಧನೆ ಮಾಡಿದವರಿಗೆ ಪುರಸ್ಕಾರ, ಪ್ರತಿ ವರ್ಷ ಕೋಟಿ ಚೆನ್ನಯ ಕ್ರೀಡಾಕೂಟ, ಆಟಿಡೊಂಜಿ ದಿನ ಕಾರ್ಯಕ್ರಮ ನಡೆಸಿಕೊಂಡು ಬರಲಾಗಿದೆ. ಕೆ.ಟಿ.ಸುವರ್ಣ, ಬ್ರಹ್ಮಶ್ರೀ ಬಿಲ್ಲವ ವೇದಿಕೆ ಅಧ್ಯಕ್ಷ