

ರಾಯಚೂರು: ದೈಹಿಕ ಬೆಳವಣಿಗೆಗೆ ಆಹಾರ ಎಷ್ಟು ಅವಶ್ಯಕತೆಯೋ ಮಾನಸಿಕ ಬೆಳವಣಿಗೆಗೆ ಶಿಕ್ಷಣದ ಅವಶ್ಯಕತೆ ಅತ್ಯವಶ್ಯವಾಗಿದೆ. ಆದರೆ ಚಾರಿತ್ರತೆ ಇಲ್ಲದ ಶಿಕ್ಷಣ ಅತ್ಯಂತ ಅಪಾಯಕಾರಿ ಎಂದು ಅಂಬೇಡ್ಕರರು ಹೇಳಿರುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ನಿವೃತ್ತ ಪ್ರಾಚಾರ್ಯ ಡಾ.ಪರಮೇಶ್ವರ ಸಾಲಿಮಠ ಹೇಳಿದರು.
ಸ್ಥಳೀಯ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಭಾನುವಾರ ಹಮ್ಮಿಕೊಂಡಿದ್ದ ಜೆ.ಎಂ.ಶರಣಯ್ಯಸ್ವಾಮಿಯ ಅಂಬೇಡ್ಕರರ ವಿಚಾರಧಾರೆಗಳು ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃತಿ ಕುರಿತು ಮಾತನಾಡಿ, ಶಿಕ್ಷಣ ಪ್ರತಿಯೊಬ್ಬರಿಗೂ ಅವಶ್ಯವಾಗಿದ್ದು, ಪ್ರಗತಿಯ ಮೊಟ್ಟ ಮೊದಲ ಹಂತವಾಗಿದೆ ಎಂದರು.
ಅಂಬೇಡ್ಕರರ ವಿಚಾರಧಾರೆಗಳು ಸಾಮಾಜಿಕ ಕೆಡಕುಗಳಿಗೆ ದಿವ್ಯೌಷಯಾಗಿದ್ದು, ಮಹಿಳೆಯರಿಗೆ ಸ್ಥಾನಮಾನ ದೊರೆಯುವಲ್ಲಿ ಅಂಬೇಡ್ಕರರ ಪಾತ್ರ ಬಹುದೊಡ್ಡದಾಗಿದೆ. ಶೋಷಿತರು ಇಂದು ಗೌರವಯುತ ಬದುಕು ಸಾಗಿಸಲು ಅಂಬೇಡ್ಕರರು ಕಾರಣೀಕರ್ತರಾಗಿದ್ದಾರೆ.
ನಾವು ಸ್ವಾತಂತ್ರವನ್ನು ಹೋರಾಟದ ಪಡೆದುಕೊಂಡಿದ್ದೇವೆಯೇ ಹೊರತು ಕೊಡುಗೆಯಾಗಿ ಅಲ್ಲ. ನಿಯಮಗಳನ್ನು ನಾವೇ ಸೃಷ್ಟಿಸಿಕೊಂಡಿದ್ದು, ನಾವೇ ಮುರಿಯುತ್ತಿದ್ದೇವೆ. ನಿಯಮಗಳಿಗೆ ತತ್ತ್ವ ಎನ್ನುವ ಹೆಸರು ನೀಡಿದಾಗ ಅವುಗಳನ್ನು ಯಾರೂ ಮೀರಿ ನಡೆಯುವುದಿಲ್ಲ ಎಂದು ಡಾ.ಪರಮೇಶ್ವರ ಸಾಲಿಮಠ ಹೇಳಿದರು.
ಸಾಹಿತಿ ಬಾಬು ಭಂಡಾರಿಗಲ್ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿ, ಸ್ವಾತಂತ್ರ, ಸಮಾನತೆಯ ನೆಲೆಯಲ್ಲಿ ಅಂಬೇಡ್ಕರರು ರಚಿಸಿದ ಸಂವಿಧಾನ ನಮಗೆ ಪವಿತ್ರ ಗ್ರಂಥವಾಗಿದೆ. ಅಂಬೇಡ್ಕರರ ಜ್ಞಾನಕ್ಕೆ ಪ್ರಪಂಚವೇ ತಲೆ ಬಾಗಿದ್ದು, ಅವರ ವಿಚಾರಧಾರೆಗಳ ಬಗ್ಗೆ ಹಲವಾರು ಪುಸ್ತಕಗಳಿದ್ದರೂ ಶರಣಯ್ಯಸ್ವಾಮಿಯ ಕೃತಿ ಅತ್ಯಂತ ಚಿಕ್ಕದಾಗಿ, ಚೊಕ್ಕದಾಗಿ ಜನರಿಗೆ ತಿಳಿಯುವಂತದ್ದಾಗಿದೆ ಎಂದರು.
ಸಾಹಿತಿ ವೀರಹನುಮಾನ ಮಾತನಾಡಿ, ಇಂದಿನ ದಿನಮಾನದಲ್ಲಿ ಬುದ್ಧ, ಬಸವ, ಅಂಬೇಡ್ಕರರ ವಿಚಾರಧಾರೆಗಳು ಅತ್ಯಂತ ಪ್ರಾಮುಖ್ಯತೆ ಹೊಂದಿದ್ದು, ಅವುಗಳ ಬಗ್ಗೆ ಹೆಚ್ಚಿನ ಚರ್ಚೆಯಾಗಬೇಕಾಗಿದೆ. ಇತರರಿಗಿಂತ ಅಂಬೇಡ್ಕರರ ದೃಷ್ಠಿಕೋನವೇ ಬೇರೆಯಾಗಿತ್ತು. ದೀನ ದಲಿತರು ಸ್ವಾವಲಂಬಿಗಳಾಗಬೇಕು ಎನ್ನುವ ಚಿಂತನೆ ಅವರನ್ನು ಶ್ರೇಷ್ಠರನ್ನಾಗಿ ಮಾಡಿದೆ ಎಂದು ಹೇಳಿದರು.
ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಅಧ್ಯಕ್ಷತೆ ವಹಿಸಿದ್ದರು. ಆಕಾಶವಾಣಿ ಮುಖ್ಯಸ್ಥ ಡಾ.ವಿ.ಜಿ.ಬಾವಲತ್ತಿ, ಸಾಹಿತಿಗಳಾದ ಡಾ.ಚನ್ನಬಸವಯ್ಯ ಹಿರೇಮಠ, ತಾಯರಾಜ್ ಮರ್ಚೆಟಹಾಳ, ಜೆ.ಎಂ.ಶರಣಯ್ಯಸ್ವಾಮಿ, ನಾಗರಾಜ ಪಲಗುಲ ಉಪಸ್ಥಿತರಿದ್ದರು.